ಗುಜರಾತ್, ತ.ನಾಡಿನ ಸುಪ್ರೀಂ ನ್ಯಾಯಮೂರ್ತಿಗಳೂ ಹೈಕೋರ್ಟ್‌ ಸ್ಥಳೀಯ ಭಾಷೆ ಬಳಕೆಗೆ ಬೆಂಬಲಿಸಲಿಲ್ಲ: ನ್ಯಾ. ಚೆಲಮೇಶ್ವರ್

ಹೈಕೋರ್ಟ್‌ಗಳಲ್ಲಿ ಹಿಂದಿಗೆ ಅನುಮತಿಸಲು ಸಂಸತ್‌ ಮತ್ತಿತರ ಶಾಸನ ರಚನಾ ಸಂಸ್ಥೆಗಳಲ್ಲಿ ಹಿಂದಿ ಬಳಸುವವರ ಸಂಖ್ಯೆ ಹೆಚ್ಚಿರುವುದು ಕಾರಣ. ಅದನ್ನು ತಿರಸ್ಕರಿಸಿದ್ದರೆ ಚುನಾವಣೆಗಳಲ್ಲಿ ತೊಡಕಾಗುತ್ತಿತ್ತು ಎಂದು ವಿವರಿಸಿದ ನ್ಯಾ. ಚಲಮೇಶ್ವರ್‌.
Justice Jasti Chelameswar
Justice Jasti Chelameswar

ಹೈಕೋರ್ಟ್‌ನಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ 2012ರಲ್ಲಿ ನಿರಾಕರಿಸಿದಾಗ ಅದನ್ನು ಬೆಂಬಲಿಸಿದ ಏಕೈಕ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ತಾನು ಎಂದು  ನಿವೃತ್ತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ಶನಿವಾರ ಹೇಳಿದರು.

ಸೌತ್ ಫಸ್ಟ್‌ ಸುದ್ದಿತಾಣದ ವತಿಯಿಂದ 'ದಕ್ಷಿಣದ ಮಾತುಕತೆ- 2023' ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಚೆಲಮೇಶ್ವರ್, ಭಾರತ ಸರ್ಕಾರ ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಅಭಿಪ್ರಾಯ ಕೋರಿದಾಗ ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಗುಜರಾತ್ ಮತ್ತು ತಮಿಳುನಾಡು ಮೂಲದ ನ್ಯಾಯಮೂರ್ತಿಗಳು ಕೂಡ ಈ ಬೇಡಿಕೆಗೆ ಬೆಂಬಲ ನೀಡಲಿಲ್ಲ ಎಂದು ಹೇಳಿದರು.

ಎರಡೂ ರಾಜ್ಯಗಳ ಶಾಸಕಾಂಗ ಸಭೆಗಳು ತಮ್ಮ ಸ್ಥಳೀಯ ಭಾಷೆಗಳನ್ನು ಹೈಕೋರ್ಟ್‌ಗಳಲ್ಲಿ ನ್ಯಾಯಾಲಯದ ಭಾಷೆಯಾಗಿ ಬಳಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ನಿರ್ಣಯಗಳನ್ನು ಅಂಗೀಕರಿಸಿದ ನಂತರ, ಸಂಪುಟ ಸಮಿತಿಯು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ಭಾಗದ ಸಲಹೆಯನ್ನು ಕೋರಿತ್ತು ಎಂದು ಆಂಧ್ರ ಪ್ರದೇಶ ಮೂಲದ ನ್ಯಾ. ಚಲಮೇಶ್ವರ್‌ ನೆನೆದರು.

ಹೈಕೋರ್ಟ್‌ಗಳ ಭಾಷೆಯಾಗಿ ಹಿಂದಿಯನ್ನು ಬಳಸಲು ಕೇಂದ್ರ ಸರ್ಕಾರ ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಎರಡು ರಾಜ್ಯಗಳಿಗೆ ಅನುಮತಿ ನೀಡಿರುವುದರಿಂದ ಬೇಡಿಕೆ ಹಿಂತೆಗೆದುಕೊಳ್ಳಲು ಯಾವುದೇ ಕಾರಣವಿಲ್ಲ ಎಂದು ಪೂರ್ಣ ನ್ಯಾಯಾಲಯದ ಸಭೆಗೆ ಒಂದು ದಿನ ಮುಂಚಿತವಾಗಿ,  ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೆ. ಮರುದಿನ ಬೆಳಿಗ್ಗೆ ಪೂರ್ಣ ನ್ಯಾಯಾಲಯ ಸಭೆ ಸೇರಿದಾಗ ನಾವು ಸ್ಥಳೀಯ ಭಾಷೆ ಬಳಕೆಗೆ ಹೊಂದಿಕೊಂಡಿಲ್ಲ. ಈಗಲೂ ಅದನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿತು ಎಂದು ಅವರು ವಿವರಿಸಿದರು.  

ಹೈಕೋರ್ಟ್‌ಗಳಲ್ಲಿ ಹಿಂದಿಗೆ ಅನುಮತಿ ನೀಡಿರುವುದಕ್ಕೆ ಸಂಸತ್‌ ಮತ್ತಿತರ ಶಾಸನ ರಚನಾ ಸಂಸ್ಥೆಗಳಲ್ಲಿ ಹಿಂದಿ ಬಳಸುವವರ ಸಂಖ್ಯೆ ಹೆಚ್ಚಿರುವುದು ಕಾರಣ. ಒಂದು ವೇಳೆ ಹಿಂದಿ ಬಳಕೆ ತಿರಸ್ಕರಿಸಿದ್ದರೆ ಚುನಾವಣೆಗಳಲ್ಲಿ ಅಲ್ಲಿರುವವರಿಗೆ ತೊಡಕಾಗುತ್ತಿತ್ತು ಎಂದು ಅವರು ಹೇಳಿದರು.

Related Stories

No stories found.
Kannada Bar & Bench
kannada.barandbench.com