
ಸರ್ವೋಚ್ಚ ನ್ಯಾಯಾಲಯದ 33 ಹಾಲಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸುಪ್ರೀಂ ಕೋರ್ಟ್‌ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಲು ಸಮ್ಮತಿಸಿದ್ದಾರೆ.
ಈ ಕುರಿತಾದ ನಿರ್ಣಯವನ್ನು ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಇದು ಭವಿಷ್ಯದ ನ್ಯಾಯಮೂರ್ತಿಗಳಿಗೂ ಅನ್ವಯಿಸಲಿದೆ.
ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿನ ಅಪಾರದರ್ಶಕತೆಯ ಸುತ್ತಲಿನ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ, ವಿಶೇಷವಾಗಿ ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ಹೇಳಲಾದ ಪ್ರರಕಣದ ನಂತರ ಸುಪ್ರೀ ಕೋರ್ಟ್‌ನ ಪೂರ್ಣ ಪೀಠ ಈ ನಿರ್ಧಾರ ಕೈಗೊಂಡಿದೆ.
ಸುಪ್ರೀಂ ಕೋರ್ಟ್ ವೆಬ್‌ತಾಣದಲ್ಲಿ ನ್ಯಾಯಮೂರ್ತಿಗಳ ಆಸ್ತಿ ವಿವರಗಳ ಪ್ರಕಟಣೆ ಈ ಹಿಂದೆ ಕಡ್ಡಾಯವಾಗಿರಲಿಲ್ಲ. ಅದು ಆಯಾ ನ್ಯಾಯಮೂರ್ತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿತ್ತು. 2009ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯವು ಮೊದಲು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದು ಕೂಡ ಸಾರ್ವಜನಿಕ ವಲಯ ಮತ್ತು ನ್ಯಾಯಾಂಗದ ಒಳಗೆ ಹೆಚ್ಚಿದ ಒತ್ತಡದಿಂದಾಗಿ ಮೂಡಿತ್ತು.
ಅದೇ ವರ್ಷ ಆಗಸ್ಟ್ 26 ರಂದು, ದೇಶದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಸ್ತಿಗಳ ವಿವರಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ಧರಿಸಿತು. ಈ ನಿರ್ಣಯವು 12 ವರ್ಷಗಳ ಹಿಂದೆ 1997ರಲ್ಲಿ ತೆಗೆದುಕೊಂಡ ಮತ್ತೊಂದು ಪೂರ್ಣ ನ್ಯಾಯಾಲಯದ ನಿರ್ಣಯಕ್ಕೆ ಅನುಸಾರವಾಗಿತ್ತು, ಅದರ ಪ್ರಕಾರ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ (ಸಿಜೆಐ) ಬಹಿರಂಗಪಡಿಸುವುದು ಕಡ್ಡಾಯವಾಗಿತ್ತು.
1997ರ ನಿರ್ಣಯದ ಪ್ರಕಾರ ಸಿಜೆಐಗೆ ಆಸ್ತಿಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದ್ದರೂ, 2009ರ ನಿರ್ಣಯದ ಹೊರತಾಗಿಯೂ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅದರ ಪ್ರಕಟಣೆ ಇಲ್ಲಿಯವರೆಗೆ ವಿವೇಚನೆಗೆ ಒಳಪಟ್ಟಿತ್ತು.