ಮತದಾನದ ವೇಳೆ ಮತದಾರರ ಗೌಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಗಳಿವೆ ಎಂದಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಅಗ್ನೋಸ್ಟೋಸ್ ಥಿಯೋಸ್ ಮತ್ತು ಭಾರತೀಯ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].
ಮತದಾರ ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿ ಮೂಲಕ ನೋಡಬಹುದು ಎಂದು ಸಿಖ್ ಚೇಂಬರ್ ಆಫ್ ಕಾಮರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರ್ಜಿದಾರ ಅಗ್ನೋಸ್ಟೋಸ್ ಥಿಯೋಸ್ ಆತಂಕ ವ್ಯಕ್ತಪಡಿಸಿದ್ದರು.
ಮತದಾರರನ್ನು ಗುರುತಿಸಲು ಸಾಧ್ಯವಾಗುವಂತಹ ಸಾಧನದಲ್ಲಿ ದತ್ತಾಂಶ ಸಂಗ್ರಹಿಸಲಾಗುತ್ತದೆ ಎಂದು ಕೂಡ ತಿಳಿಸಲಾಗಿತ್ತು.
ಹೀಗೆ ವಾದ ಮಾಡಲಾಗದು ಎಂದ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಬಗೆಗಿನ ಬಹುತೇಕ ಕಳವಳವನ್ನು ಸುಪ್ರೀಂ ಕೋರ್ಟ್‌ನ ಈಚಿನ ತೀರ್ಪು ಪರಿಹರಿಸಿದೆ ಎಂದರು.
ಅರ್ಜಿದಾರರು ಸುಪ್ರೀಂ ಕೋರ್ಟ್ ತೀರ್ಪನ್ನು ಓದಿಲ್ಲ. ಯಾರು ಯಾರಿಗೆ ಮತ ಹಾಕುತ್ತಾರೆ ಎಂದು ಚುನಾವಣಾ ಅಧಿಕಾರಿಗೆ ತಿಳಿಯುವುದಿಲ್ಲ ಎಂದು ನ್ಯಾ. ಖನ್ನಾ ಹೇಳಿದರು. ಬಳಿಕ ಪೀಠ ಅರ್ಜಿ ವಜಾಗೊಳಿಸಿತು.