
ಸೂರಜ್‌ಗಢದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವಾಹನಗಳಿಗೆ 2016ರಲ್ಲಿ ನಕ್ಸಲರು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಹಿಂದೆ ಸರಿದಿದ್ದಾರೆ [ಸುರೇಂದ್ರ ಪುಂಡಲೀಕ ಗಾಡ್ಲಿಂಗ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಪ್ರಕರಣವನ್ನು ನ್ಯಾಯಮೂರ್ತಿ ಸುಂದರೇಶ್ ಅವರ ಮುಂದೆ ಪಟ್ಟಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ವಿವರಿಸಲಾಗಿದೆ.
ಗಾಡ್ಲಿಂಗ್ ಅವರ ಜಾಮೀನು ಅರ್ಜಿಯನ್ನು ಜನವರಿ 2023ರಲ್ಲಿ ಬಾಂಬೆ ಹೈಕೋರ್ಟ್ ನಾಗಪುರ ಪೀಠ ತಿರಸ್ಕರಿಸಿತ್ತು. ಹೀಗಾಗಿ ವಕೀಲರಾದ ನೂಪುರ್ ಕುಮಾರ್ ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.
ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿರುವ ಸೂರಜ್‌ಗಢ ಗಣಿಗಳಿಂದ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಸುಮಾರು 39 ವಾಹನಗಳಿಗೆ ಮಾವೋವಾದಿಗಳು 2016ರ ಡಿಸೆಂಬರ್‌ನಲ್ಲಿ ಬೆಂಕಿ ಹಚ್ಚಿದ್ದರು.
ಗಡ್‌ಚಿರೋಲಿ ಪೊಲೀಸರು ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 341, 342 (ಅಕ್ರಮವಾಗಿ ತಡೆಯುವುದು, ಪ್ರತಿಬಂಧಿಸುವುದು), 435 (ಸ್ಫೋಟಕ ಬಳಸಿ ಕೇಡು ಬಗೆಯುವುದು), 323 (ಸ್ವಇಚ್ಛೆಯಿಂದ ಮಾಡುವ ಗಾಯ), 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 143, 147 (ಗಲಭೆ), 148, 149 (ಕಾನೂನುಬಾಹಿರ ಸಭೆಗಳಲ್ಲಿ ಗಲಭೆ) ಹಾಗೂ 120-ಬಿ (ಕ್ರಿಮಿನಲ್ ಸಂಚು) ಅಡಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಯುಎಪಿಎ ಕಾಯಿದೆಯ ಸೆಕ್ಷನ್ 16, 18, 20 ಮತ್ತು 23 (ಭಯೋತ್ಪಾದಕ ಚಟುವಟಿಕೆಗಳಿಗೆ ಶಿಕ್ಷೆ) ಹಾಗೂ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಲಾಗಿತ್ತು.
ಘಟನೆಯಲ್ಲಿ ಗಾಡ್ಲಿಂಗ್ ಭಾಗಿಯಾಗಿದ್ದರು ಎಂದಿದ್ದ ಪೊಲೀಸರು ಅವರ ವಿರುದ್ಧ ಯುಎಪಿಎ ಕಾಯಿದೆಯಡಿ ಆರೋಪ ಮಾಡಿದ್ದರು. 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕೂಡ ಗಾಡ್ಲಿಂಗ್ ಅವರು ಆರೋಪಿಯಾಗಿದ್ದು , ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ನಡೆಸುತ್ತಿದೆ.
ಗಾಡ್ಲಿಂಗ್ ಅವರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ನೇರ ಸದಸ್ಯತ್ವ ಹೊಂದಿದ್ದಾರೆ ಎಂಬ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ತೋರುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿತ್ತು. ಜಾಮೀನು ಕೋರಿ ಮಾಡಲಾಗಿರುವ ವಾದಕ್ಕಿಂತಲೂ ಆರೋಪಗಳು ಬಹಳ ಗಂಭೀರವಾಗಿವೆ ಎಂದು ಅದು ತಿಳಿಸಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿಯೂ ಗಾಡ್ಲಿಂಗ್ ಆರೋಪಿಯಾಗಿದ್ದಾರೆ .ಅವರು ಸದ್ಯ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.