ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ವಿ ಭಟ್ಟಿ ಅವರು ಹಿಂದೆ ಸರಿದಿದ್ದಾರೆ (ನಾರಾ ಚಂದ್ರಬಾಬು ನಾಯ್ಡಯು ವರ್ಸಸ್ ಆಂಧ್ರಪ್ರದೇಶ ಮತ್ತಿತರರು).
ಪ್ರಕರಣವನ್ನು ಆಲಿಸುವ ವಿಚಾರದಲ್ಲಿ ಆಂಧ್ರಪ್ರದೇಶದವರೇ ಆದ ನ್ಯಾ. ಭಟ್ಟಿ ಅವರಿಗೆ ಕೆಲ ಅಭ್ಯಂತರಗಳಿವೆ ಎಂದು ಪೀಠದ ಮತ್ತೊಬ್ಬ ಸದಸ್ಯರೂ ಆದ ನ್ಯಾ. ಸಂಜೀವ್ ಖನ್ನಾ ಅವರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೊಂದು ಪೀಠದ ಮುಂದೆ ಪಟ್ಟಿ ಮಾಡಲು ಸಿಜೆಐ ಅವರ ಮುಂದಿರಿಸಲು ನ್ಯಾಯಾಲಯವು ಸೂಚಿಸಿತು.
ಕೆಲ ದಿನಗಳ ಹಿಂದಷ್ಟೇ ಆಂಧ್ರ ಪ್ರದೇಶ ಹೈಕೋರ್ಟ್ ಚಂದ್ರಬಾಬು ನಾಯ್ಡು ಅವರು ಎಫ್‌ಐಆರ್ ರದ್ದತಿ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿತ್ತು. ನಾಯ್ಡು ಅವರ ವಿರುದ್ಧ ಆರೋಪಿಸಲಾದ ಕೃತ್ಯಗಳು ಅವರು ಮುಖ್ಯಮಂತ್ರಿಯಾಗಿ ಸದ್ಭಾವನೆಯಿಂದ ಹಾಗೂ ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಭಾಗವಾಗಿ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ ಶ್ರೀನಿವಾಸರೆಡ್ಡಿ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ತಿಳಿಸಿದ್ದರು.