ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಎನ್ ಎ ಹ್ಯಾರಿಸ್ ಮತ್ತು ಕೆ ಶಿವಕುಮಾರ್ ಇನ್ನಿತರರ ನಡುವಣ ಪ್ರಕರಣ].
ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ತಮ್ಮೆಲ್ಲಾ ತಕರಾರುಗಳನ್ನು ಹೈಕೋರ್ಟ್‌ನಲ್ಲಿ ಎತ್ತಬಹುದು ಎಂದು ಅರ್ಜಿದಾರರಿಗೆ ಹೇಳಿದೆ.
2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಶಾಂತಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಕುಮಾರ್ ಅವರು ಹ್ಯಾರಿಸ್ ವಿರುದ್ಧ ಸೋತಿದ್ದರು.
ಪ್ರಕರಣ ವಜಾಗೊಳಿಸುವಂತೆ ಹ್ಯಾರಿಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆ ಮುಂದುವರೆಸಲು ಕಳೆದ ಫೆಬ್ರವರಿ 12 ರಂದು ನಿರ್ಧರಿಸಿದ್ದರು.
ಚುನಾವಣಾ ದಾಖಲೆಗಳಲ್ಲಿ ಹ್ಯಾರಿಸ್ ಸುಳ್ಳು ಘೋಷಣೆಗಳನ್ನು ಮಾಡಿದ್ದು ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಅಂಗೀಕರಿಸಿದ್ದು ಕಾನೂನುಬಾಹಿರ ಎಂದು ಶಿವಕುಮಾರ್ ವಾದಿಸಿದ್ದರು.
ಆದರೆ ಇದನ್ನು ನಿರಾಕರಿಸಿದ್ದ ಹ್ಯಾರಿಸ್, ಶಿವಕುಮಾರ್ ಅವರ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದಿದ್ದರು. ಚುನಾವಣಾ ಫಲಿತಾಂಶಗಳ ಮೇಲೆ ಇಂತಹ ಆರೋಪಿತ ಸುಳ್ಳು ಘೋಷಣೆಗಳು ಹೇಗೆ ಪರಿಣಾಮ ಬೀರಿವೆ ಎಂಬುದನ್ನು ದೂರುದಾರರು ತೋರಿಸಬೇಕಾದ ಅಗತ್ಯವಿಲ್ಲ ತೋರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಹೀಗಾಗಿ ಹ್ಯಾರಿಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹ್ಯಾರಿಸ್ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಶಿವಕುಮಾರ್ ಅವರನ್ನು ಮತ್ತೊಬ್ಬ ಹಿರಿಯ ವಕೀಲ ರಂಜಿತ್ ಕುಮಾರ್ ಪ್ರತಿನಿಧಿಸಿದ್ದರು.