[ಬಕ್ರೀದ್‌ ಆಚರಣೆ] ಯಾವುದೇ ಬಗೆಯ ಒತ್ತಡ ಹೇರುವಿಕೆಯು ಜೀವಿಸುವ ಹಕ್ಕನ್ನು ಅತಿಕ್ರಮಿಸಲಾಗದು: ಸುಪ್ರೀಂ ಕೋರ್ಟ್‌

ಕಾವಡಿ ಯಾತ್ರೆಯ ಸಂಬಂಧ ನ್ಯಾಯಾಲಯವು ನೀಡಿರುವ ತೀರ್ಪನ್ನೇ ಬಕ್ರೀದ್‌ ಪ್ರಕರಣದಲ್ಲಿಯೂ ಅನುಸರಿಸಬೇಕು ಎಂದ ಸುಪ್ರೀಂ ಪೀಠ. ವರ್ತಕರ ಒತ್ತಡದ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಿಸಿದ್ದಾಗಿ ಪೀಠಕ್ಕೆ ತಿಳಿಸಿದ್ದ ಕೇರಳ ಸರ್ಕಾರ.
Eid, Kerala, Supreme Court
Eid, Kerala, Supreme Court

ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಿಸಲು ಮುಂದಾದ ಕೇರಳ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ಕಾವಡಿ ಯಾತ್ರೆಯ ಕುರಿತಾದ ಪ್ರಕರಣದಲ್ಲಿ ತಾನು ನೀಡಿರುವ ಆದೇಶವನ್ನು ಅನುಸರಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್‌ ಆದೇಶದ ನಂತರ ಉತ್ತರ ಪ್ರದೇಶ ಸರ್ಕಾರ ಕಾವಡಿ ಯಾತ್ರೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ನೆನೆಯಬಹುದು.

ಬಕ್ರೀದ್‌ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವುದನ್ನು ಆಕ್ಷೇಪಿಸಿ ದೆಹಲಿ ಮೂಲದ ಪಿ ಕೆ ಡಿ ನಂಬಿಯಾರ್‌ ಎಂಬುವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾ. ರೋಹಿಂಟನ್‌ ಫಾಲಿ ನಾರಿಮನ್‌ ಹಾಗೂ ನ್ಯಾ. ಬಿ ಆರ್‌ ಗವಾಯಿ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ ನಡೆಸಿತು.‌ ಕಾವಡಿ ಯಾತ್ರೆಯ ಸಂಬಂಧ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಸ್ವಯಂ ಪ್ರೇರಣಾ ಅರ್ಜಿಯಲ್ಲಿ ಮಧ್ಯಪ್ರವೇಶ ಕೋರಿ ಮೇಲಿನ ಮನವಿಯು ಸಲ್ಲಿಕೆಯಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ಪೀಠವು, “ನಾವು ಕೇರಳ ಸರ್ಕಾರಕ್ಕೆ ಸಂವಿಧಾನ 21ನೇ ವಿಧಿ ಹಾಗೂ 144ನೇ ವಿಧಿಗಳನ್ನು ಜೊತೆಯಾಗಿರಿಸಿ ನೋಡಲು ನಿರ್ದೇಶಿಸುತ್ತೇವೆ ಹಾಗೂ ಕಾವಡಿ ಯಾತ್ರೆಯ ಸಂದರ್ಭದಲ್ಲಿ ನಾವು ನೀಡಿರುವ ಆದೇಶಗಳನ್ನು ಅನುಸರಿಸಲು ಸೂಚಿಸುತ್ತೇವೆ,” ಎಂದಿತು.

ಬಕ್ರೀದ್‌ ಆಚರಣೆಯ ಹಿನ್ನೆಲೆಯಲ್ಲಿ ವರ್ತಕರ ಹಾಗೂ ಸಾರ್ವಜನಿಕರ ಒತ್ತಡದ ಕಾರಣದಿಂದಾಗಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದಾಗಿ ಕೇರಳ ಸರ್ಕಾರ ಸಲಿಸಿದ್ದ ಹೇಳಿಕೆಯ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. “ಭಾರತದ ನಾಗರಿಕರಿಗೆ ನೀಡಿರುವ ಅತ್ಯಂತ ಮೌಲಿಕವಾದ ಜೀವಿಸುವ ಹಕ್ಕನ್ನು ಯಾವುದೇ ಬಗ್ಗೆಯ ಒತ್ತಡ ಹೇರುವಿಕೆಯ ಮೂಲಕ ಅತಿಕ್ರಮಿಸಲಾಗದು. ಹೀಗಿದ್ದೂ ಕೂಡ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದನ್ನು ಸಾರ್ವಜನಿಕರು ನ್ಯಾಯಾಲಯದ ಗಮನಕ್ಕೆ ತರಬಹುದಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು,” ಎಂದಿತು.

ತಮ್ಮ ಅರ್ಜಿಯಲ್ಲಿ ನಂಬಿಯಾರ್‌ ಅವರು, ಕೆರಳದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದಾಗಿ ತಿಳಿಸಿದ್ದರು. “ಭಾರತದ ನಾಗರಿಕರಿಗೆ ಗಂಭೀರ ಹತಾಶೆ ಉಂಟು ಮಾಡುವ ರೀತಿಯಲ್ಲಿ ಕೇರಳ ಸರ್ಕಾರವು ಜು. 18, 19 ಮತ್ತು 20ರಂದು ಲಾಕ್‌ಡೌನ್‌ ನಿರ್ಬಂಧಗಳನ್ನು ಬಕ್ರೀದ್ ಹಿನ್ನೆಲೆಯಲ್ಲಿ ಸಡಿಲಿಸಿರುವುದಾಗಿ ಘೋಷಣೆ ಹೊರಡಿಸಿದೆ,” ಎಂದು ಅವರು ಮನವಿಯಲ್ಲಿ ಹೇಳಿದ್ದರು. ವಕೀಲೆ ಪ್ರೀತಿ ಸಿಂಗ್‌ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿತ್ತು.

ಅರ್ಜಿದಾರರ ಆಕ್ಷೇಪಣೆಗೆ ಉತ್ತರಿಸಿದ್ದ ಕೇರಳ ಸರ್ಕಾರವು ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ತಮಗೆ ಬ್ರಕೀದ್‌ ವೇಳೆ ನಡೆಯುವ ವ್ಯಾಪಾರದಿಂದ ಕೊಂಚ ಮಟ್ಟಿಗಿನ ಅನುಕೂಲವಾಗಲಿದೆ ಎಂದು ವರ್ತಕರು ಕೋರಿದ್ದ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಲು ಕ್ರಮ ಕೈಗೊಳ್ಳಲಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಮುಂದುವರೆದು, ಹಬ್ಬದ ಸಂದರ್ಭಕ್ಕಾಗಿಯೇ ವರ್ತಕರು ಸರಕು ಸರಂಜಾಮುಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಒಂದು ವೇಳೆ ನಿರ್ಬಂಧಗಳನ್ನು ಸಡಿಲಿಸದೆ ಹೋದರೆ ಈ ಕಠಿಣ ನಿಯಮಾವಳಿಗಳನ್ನು ಗಾಳಿಗೆ ತೂರಿ ತಾವುಗಳು ರಾಜ್ಯಾದ್ಯಂತ ಅಂಗಡಿಯನ್ನು ತೆರೆಯಬೇಕಾಗುತ್ತದೆ ಎಂದು ವರ್ತಕರ ಒಕ್ಕೂಟವು ಪ್ರತಿಭಟಿಸಿದೆ. ಈ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರವು ನಿರ್ಬಂಧಗಳನ್ನು ಸಡಿಲಗೊಳಿಸುವ ನಿರ್ಧಾರ ಕೈಗೊಂಡಿದೆ. ನಿರ್ಬಂಧಗಳನ್ನು ಸಡಿಲಿಸಲಾಗಿದೆಯಾದರೂ ಕೋವಿಡ್‌ ಸಂಬಂಧಿ ಶಿಷ್ಟಾಚಾರಗಳು ಮುಂದುವರೆಯಲಿವೆ ಎಂದು ಹೇಳಿತ್ತು.

ಅಲ್ಲದೆ, ಕನಿಷ್ಠ ಒಂದು ಬಾರಿ ಲಸಿಕೆ ತೆಗೆದುಕೊಂಡಿರುವವರು ಮಾತ್ರವೇ ಅಂಗಡಿಗಳಿಗೆ ಭೇಟಿ ನೀಡಬೇಕು ಎಂದು ಕೇರಳದ ಮುಖ್ಯಮಂತ್ರಿಯವರು ಜನತೆಯಲ್ಲಿ ಮನವಿ ಮಾಡಿರುವುದಾಗಿಯೂ ಸರ್ಕಾರ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com