ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಕೌನ್ಸೆಲಿಂಗ್‌ ಮಾಡಲು ಉ.ಪ್ರ. ಸರ್ಕಾರ ವಿಫಲ ಎಂದ ಸುಪ್ರೀಂ

ನ್ಯಾಯಾಲಯ ಆದೇಶ ಮಾಡದ ಹೊರತು ಸರ್ಕಾರ ಏನನ್ನೂ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಓಕ ಮತ್ತು ನ್ಯಾ. ಪಂಕಜ್‌ ಮಿತ್ತಲ್‌ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
Supreme Court
Supreme Court

ಶಿಕ್ಷಕರ ಸೂಚನೆಯಂತೆ ಸಹಪಾಠಿಗಳಿಂದ ಕಪಾಳಮೋಕ್ಷಕ್ಕೆ ಗುರಿಯಾದ ವಿದ್ಯಾರ್ಥಿಗೆ ಕೌನ್ಸೆಲಿಂಗ್‌ ಮಾಡಲು ವಿಫಲವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಲಯ ಆದೇಶ ಮಾಡದ ಹೊರತು ಸರ್ಕಾರ ಏನನ್ನೂ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಓಕ್‌ ಮತ್ತು ನ್ಯಾ. ಪಂಕಜ್‌ ಮಿತ್ತಲ್‌ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಸೆಪ್ಟೆಂಬರ್‌ 25ರ ಆದೇಶ ಪಾಲಿಸಲು ತಡ ಮಾಡಿರುವ ಸರ್ಕಾರದ ನಡೆಗೆ ನ್ಯಾಯಾಲಯವು ಅತೃಪ್ತಿ ವ್ಯಕ್ತಪಡಿಸಿದ್ದು, ಇಷ್ಟು ತಡವಾದ ಮೇಲೆ ಕೌನ್ಸೆಲಿಂಗ್‌ ಮಾಡುವುದರಿಂದ ಏನಾದರೂ ಉದ್ದೇಶ ಸಾಧಿಸಿದಂತಾಗುತ್ತದೆಯೇ ಎಂದು ಪ್ರಶ್ನಿಸಿದೆ.

“ನಾವು ಆದೇಶ ಮಾಡದ ಹೊರತು ನೀವು ಏನನ್ನೂ ಮಾಡುವುದಿಲ್ಲ. ನೀವು ಏನಾದರೂ ಮಾಡುತ್ತೀರಾ ಅಥವಾ ಬರೀ ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಾ ಎನ್ನುವ ಬಗ್ಗೆ ಏನಾದರೂ ಮಾಡಬೇಕು. ಸೆಪ್ಟೆಂಬರ್‌ 25ರಂದು ನಾವು ಆದೇಶ ಮಾಡಿದ್ದೇವೆ. ನಿಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳನ್ನು ಈ ರೀತಿ ಕಂಡರೆ, ಮೂರು ತಿಂಗಳ ಬಳಿಕ ತಜ್ಞರಿಂದ ಕೌನ್ಸೆಲಿಂಗ್‌ ಮಾಡುವ ಅಗತ್ಯವೇನಿದೆ” ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಪ್ರಕರಣದಲ್ಲಿ ಭಾಗಿಯಾದ ಯಾವೊಂದು ವಿದ್ಯಾರ್ಥಿಗೂ ಕೌನ್ಸೆಲಿಂಗ್‌ ನಡೆಸಲಾಗಿಲ್ಲ ಎಂಬುದನ್ನು ಪರಿಗಣಿಸಿರುವ ಪೀಠವು ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆಗೆ ಯಾವ ವಿಧಾನ ಮತ್ತು ರೀತಿಯಲ್ಲಿ ಕೌನ್ಸೆಲಿಂಗ್‌ ನಡೆಸಬೇಕು ಎಂದು ಸಲಹೆ ನೀಡುವಂತೆ ಸೂಚಿಸಿದೆ.

ಶಾಲೆಯ ಶಿಕ್ಷಕರಾದ ತ್ರಿಪ್ತಾ ತ್ಯಾಗಿ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಮುಸ್ಲಿಂ ವಿದ್ಯಾರ್ಥಿಯ ಧರ್ಮದ ಕುರಿತು ಕೇಳಿದ್ದ ತ್ಯಾಗಿ ಅವರು ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಲ್ಲದೇ ಆತನ ಸಹಪಾಠಿಗಳಿಗೆ ಹಲ್ಲೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ವಿದ್ಯಾರ್ಥಿಯ ಮೇಲಿನ ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆನಂತರ ಆ ಖಾಸಗಿ ಶಾಲೆಯ ನಿರ್ಬಂಧಿಸಲಾಗಿತ್ತು.

Kannada Bar & Bench
kannada.barandbench.com