ನಿವೃತ್ತ ಸೇನಾ ಸಿಬ್ಬಂದಿ ಅಥವಾ ಅವರ ಕುಟುಂಬಸ್ಥರಿಗೆ ಪಿಂಚಣಿ ನೀಡುವ 'ಸಮಾನ ಶ್ರೇಣಿ ಸಮಾನ ಪಿಂಚಣಿ' ಯೋಜನೆಯಡಿ (ಒಆರ್‌ಒಪಿ ಯೋಜನೆ) ಬಾಕಿ ಪಾವತಿ ಮಾಡಲು ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಗಡುವು ವಿಧಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಕೆಳಗಿನ ನಿರ್ದೇಶನ ನೀಡಿದೆ:
ಕುಟುಂಬ ಪಿಂಚಣಿದಾರರು ಮತ್ತು ಶೌರ್ಯ ಪ್ರಶಸ್ತಿ ವಿಜೇತರಿಗೆ ಏಪ್ರಿಲ್ 30, 2023 ರಂದು ಅಥವಾ ಅದಕ್ಕೂ ಮುನ್ನವೇ ಒಂದೇ ಕಂತಿನಲ್ಲಿ ಪಿಂಚಣಿ ಬಾಕಿ ಹಣ ಪಾವತಿಸಬೇಕು.
70 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಯೋಧರಿಗೆ ಜೂನ್ 30, 2023ರಂದು ಅಥವಾ ಅದಕ್ಕೂ ಮೊದಲು ಪಾವತಿಸಬೇಕು. ಒಂದೇ ಕಂತಿನಲ್ಲಿ ಪಾವತಿಸಲು ಇಲ್ಲವೇ ಜೂನ್ 30, 2023ರ ಗಡುವಿನೊಳಗೆ ಕಂತುಗಳಲ್ಲಿ ಪಾವತಿಸುವ ಆಯ್ಕೆ ಕೇಂದ್ರಕ್ಕಿದೆ.
ಉಳಿದ ಸಿಬ್ಬಂದಿಗೆ, ಮೂರು ಸಮಾನ ಕಂತುಗಳಲ್ಲಿ ಅಂದರೆ ಆಗಸ್ಟ್ 31, 2023, ನವೆಂಬರ್ 30, 2023 ಮತ್ತು ಫೆಬ್ರವರಿ 28, 2024ರಂದು ಅಥವಾ ಅದಕ್ಕೂ ಮುನ್ನ ಪಾವತಿ ಮಾಡತಕ್ಕದ್ದು.
ಕೇಂದ್ರ ಸರ್ಕಾರ ಜಾರಿಗೆ ತಂದ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆಯಡಿ ನಿಗದಿತ ಗಡುವಿನೊಳಗೆ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ ಆ ಗಡುವನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಬದಲಿಸಿದೆ ಎಂದು ದೂರಿ ಪಿಂಚಣಿ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಂದಿನ ವಿಚಾರಣೆ ವೇಳೆ ಒಆರ್‌ಒಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಗೆ ಅಂತ್ಯ ಹಾಡಲು ಚಿಂತಿಸುತ್ತಿರುವುದಾಗಿ ಹೇಳಿತ್ತು. ಅದರ ವಿವರಗಳು ಕೆಳಗಿನ ಲಿಂಕ್‌ನಲ್ಲಿ ಲಭ್ಯ: