ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್‌: ನಿಯಮ ರೂಪಿಸಿದ ಸುಪ್ರೀಂ; ಅಪಮಾನಿಸದಂತೆ ನ್ಯಾಯಾಲಯಗಳಿಗೆ ಎಚ್ಚರಿಕೆ

ಉತ್ತರ ಪ್ರದೇಶದ ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಅಲಾಹಾಬಾದ್ ಹೈಕೋರ್ಟ್ ಕಳೆದ ವರ್ಷ ನೀಡಿದ ಆದೇಶಗಳನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ
Published on

ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ನ್ಯಾಯಾಲಯಗಳು ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್ಒಪಿ) ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದ್ದು ಅಧಿಕಾರಿಗಳನ್ನು ಅಪಮಾನಿಸದಂತೆ ಅವರ ಉಡುಗೆ ತೊಡುಗೆಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ನ್ಯಾಯಾಲಯಗಳಿಗೆ ಎಚ್ಚರಿಕೆ ನೀಡಿದೆ.

ಎಸ್‌ಒಪಿಯನ್ನು ಎಲ್ಲಾ ಹೈಕೋರ್ಟ್‌ಗಳು ಪಾಲಿಸಬೇಕಿದ್ದು ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್‌ ನೀಡಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಒತ್ತಿ ಹೇಳಿತು.

ಸುಪ್ರೀಂ ರೂಪಿಸಿರುವ ನಿಯಮಗಳು

  • ಸಾರಾಂಶ ಪ್ರಕ್ರಿಯೆಗಳಲ್ಲಿ ಸಾಕ್ಷ್ಯಕ್ಕಾಗಿ ಅಧಿಕಾರಿಗಳ ವೈಯಕ್ತಿಕ ಹಾಜರಾತಿ ಅಗತ್ಯವಾಗಬಹುದು ಎಂದು ಉನ್ನತ ನ್ಯಾಯಾಲಯ ಒಪ್ಪಿಕೊಂಡಿತಾದರೂ, ಅಫಿಡವಿಟ್‌ಗಳ ಮೂಲಕ ಅಧಿಕಾರಿಗಳು ಯಾವುದೇ ಸಮಸ್ಯೆ ಪರಿಹರಿಸಬಹುದಾದರೆ ಆಗ ಅವರಿಗೆ ಸಮನ್ಸ್‌ ನೀಡುವಂತಿಲ್ಲ.

  • ಒಬ್ಬ ಅಧಿಕಾರಿಯ ದೃಷ್ಟಿಕೋನ ನ್ಯಾಯಾಲಯದ ದೃಷ್ಟಿಕೋನಕ್ಕಿಂತ ಭಿನ್ನವಾಗಿದೆ ಎಂಬ ಕಾರಣಕ್ಕೆ ಅವರಿಗೆ ಸಮನ್ಸ್‌ ನೀಡುವಂತಿಲ್ಲ. ಆದರೂ, ಸತ್ಯ ಮರೆಮಾಚಿದರೆ ಅಧಿಕಾರಿಗಳ ಖುದ್ದು ಉಪಸ್ಥಿತಿ ಅಗತ್ಯವಾಗಬಹುದು.

  • ಅಧಿಕಾರಿಗಳ ವೇಷಭೂಷಣದ ಬಗ್ಗೆ ನ್ಯಾಯಾಲಯಗಳು ಮಾಡುವ ಟೀಕೆಗಳಿಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ಸರ್ವೋಚ್ಚ ನ್ಯಾಯಾಲಯ ತಮ್ಮದೇ ಕಚೇರಿಯ ವಸ್ತ್ರಸಂಹಿತೆಯನ್ನು ಅಧಿಕಾರಿಗಳು ಪಾಲಿಸುತ್ತಿದ್ದರೆ ನ್ಯಾಯಾಲಯಗಳು ಅವರನ್ನು ಟೀಕಿಸುವಂತಿಲ್ಲ.

  • ಅಗತ್ಯವಿಲ್ಲದಿದ್ದಾಗ ಅಥವಾ ಸರ್ಕಾರಿ ಅಧಿಕಾರಿಗಳನ್ನು ಆಲಿಸುವುದು ಇಲ್ಲದೇ ಇದ್ದಾಗ ಇಡೀ ವಿಚಾರಣೆಯ ಅವಧಿಯವರೆಗೂ ನಿಲ್ಲುವಂತೆ ಸೂಚಿಸಬಾರದು.

  • ಅಧಿಕಾರಿಗಳನ್ನು ಅವಮಾನಿಸುವಂತಹ ಟೀಕೆ ಅವಲೋಕನಗಳನ್ನು ನ್ಯಾಯಾಲಯಗಳು ತಪ್ಪಿಸಬೇಕು.

  • ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಲು ಅನುವಾಗುವಂತೆ ಮುಂಚಿತವಾಗಿಯೇ ಸಮನ್ಸ್‌ ಆದೇಶ ನೀಡಬೇಕು.

  • ಅಂತಹ ಹಾಜರಿಗೆ ಮೊದಲ ಆಯ್ಕೆ ವೀಡಿಯೊ ಕಾನ್ಫರೆನ್ಸ್‌ ಆಗಿರಬೇಕು.

ಮಾರ್ಗಸೂಚಿಗಳ ಕುರಿತಾದ ಆದೇಶವನ್ನು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಮಾಹಿತಿಗಾಗಿ ರವಾನಿಸುವಂತೆ ತನ್ನ ರಿಜಿಸ್ಟ್ರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತು.

ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಅಲಾಹಾಬಾದ್ ಹೈಕೋರ್ಟ್ ಕಳೆದ ವರ್ಷ ಹೊರಡಿಸಿದ್ದ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಜರಾಗಿದ್ದರು.

ಸುಪ್ರೀಂ ಕೋರ್ಟ್ ಮತ್ತು ಅಲಾಹಾಬಾದ್‌ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಂಘದ ಪರವಾಗಿ ವಕೀಲ ನಿಶಿತ್ ಅಗರ್ವಾಲ್ ವಾದ ಮಂಡಿಸಿದ್ದರು. ವಕೀಲೆ ಪ್ರೀತಿಕಾ ದ್ವಿವೇದಿ ಅವರು ಅಲಾಹಾಬಾದ್ ಹೈಕೋರ್ಟನ್ನು ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
State of Uttar Pradesh and ors vs Association of Retired Judges.pdf
Preview
Kannada Bar & Bench
kannada.barandbench.com