ಮಾನ್ಯತೆ ಹೊಂದಿಲ್ಲದ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ತನ್ನಲ್ಲಿ ನೋಂದಾಯಿಸಿಕೊಂಡಿರುವ ಆಟಗಾರರು, ತರಬೇತುದಾರರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹೊರಡಿಸಿದ್ದ ಸುತ್ತೋಲೆಗಳಿಗೆ ತಡೆ ವಿಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಬದಿಗೆ ಸರಿಸಿದೆ [ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಬಿಟ್ಸ್‌ಪೋರ್ಟ್ ಪ್ರೈ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಸಂಬಂಧಪಟ್ಟ ಎಲ್ಲಾ ಪಕ್ಷಕಾರರ ವಾದ ಆಲಿಸದೆ ಹೈಕೋರ್ಟ್ ಪೀಠ ಏಕಪಕ್ಷೀಯವಾಗಿ ಆದೇಶ ಅಂಗೀಕರಿಸಿದೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಹೀಗಾಗಿ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್ ಎಲ್ಲಾ ಪಕ್ಷಕಾರರ ವಾದ ಆಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ಸೂಚಿಸಿತು. ಅಲ್ಲದೆ ತ್ವರಿತವಾಗಿ ತೀರ್ಪು ನೀಡುವಂತೆಯೂ ಅದು ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ಕಳೆದ ಜುಲೈನಲ್ಲಿ ಈ ಸುತ್ತೋಲೆಗಳಿಗೆ ತಡೆ ನೀಡಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಮುಂಬರುವ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಆಟಗಾರರು, ತರಬೇತುದಾರರು ಹಾಗೂ ಸಿಬ್ಬಂದಿ ಭಾಗವಹಿಸದಂತೆ ಸೂಚಿಸಿದ್ದ ಸುತ್ತೋಲೆಗಳನ್ನು ಆಧರಿಸಿ ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಬಿಐಎಗೆ ನಿರ್ಬಂಧ ವಿಧಿಸಿದ್ದರು.
ಏಪ್ರಿಲ್ ಮತ್ತು ಜುಲೈನಲ್ಲಿ ಬಿಎಐ ಹೊರಡಿಸಿದ ಎರಡು ಸುತ್ತೋಲೆಗಳನ್ನು ಪ್ರಶ್ನಿಸಿ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್‌ನ ಸಂಘಟಕರು ಮಾಡಿದ ಮನವಿ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಬಿಎಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಬಿಎಐ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ನೇತೃತ್ವದ ವಕೀಲರ ತಂಡ ವಾದ ಮಂಡಿಸಿತ್ತು. ಖಾಸಗಿ ಲೀಗ್ ಸಂಘಟಕರ ಪರವಾಗಿ ಹಿರಿಯ ವಕೀಲ ಧ್ರುವ್ ಮೆಹ್ತಾ ವಾದಿಸಿದ್ದರು.