ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯಿದೆ: ಆಕ್ಷೇಪಣೆ ಕೋರಿದ್ದ ಜೆಪಿಸಿ ನೋಟಿಸ್‌ಗೆ ನೀಡಿದ್ದ ತಡೆ ತೆರವು ಮಾಡಿದ ಸುಪ್ರೀಂ

ಮಸೂದೆಯನ್ನು ತಮಿಳಿನಲ್ಲಿ ಪ್ರಕಟಿಸಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮಸೂದೆಯನ್ನು ತಮಿಳು ಭಾಷೆಯಲ್ಲಿ ಪ್ರಕಟಿಸಲಾಗುವುದು ಎಂದಿರುವುದನ್ನು ರಜಾಕಾಲೀನ ಪೀಠ ಪರಿಗಣಿಸಿದೆ.
Supreme Court of India
Supreme Court of India
Published on

ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ 2023ಕ್ಕೆ ಸಾರ್ವಜನಿಕರು ಮತ್ತು ಸಂಬಂಧಿತರಿಂದ ಸಲಹೆ ಮತ್ತು ಆಕ್ಷೇಪಣೆ ಕೋರಿದ್ದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮಾಧ್ಯಮ ಪ್ರಕಟಣೆಗೆ ಮದ್ರಾಸ್‌ ಹೈಕೋರ್ಟ್‌ ಈಚೆಗೆ ನೀಡಿದ್ದ ತಡೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತೆರವುಗೊಳಿಸಿದೆ [ಭಾರತ ಸರ್ಕಾರ ವರ್ಸಸ್‌ ಥೀರನ್‌ ತಿರುಮುರುಗನ್‌ ಮತ್ತು ಇತರರು].

ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿದೆ.

ಜೂನ್‌ 5ರ ವೇಳೆಗೆ ಮಸೂದೆಯನ್ನು ತಮಿಳಿನಲ್ಲಿ ಪ್ರಕಟಿಸಲಾಗುವುದು ಎಂಬ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಹೇಳಿಕೆಯನ್ನು ಪೀಠವು ಪರಿಗಣಿಸಿದೆ. ಅರ್ಜಿದಾರರೊಬ್ಬರು ಮಸೂದೆಯನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪ್ರಕಟಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

15 ದಿನಗಳಲ್ಲಿ ಮಸೂದೆಗೆ ಆಕ್ಷೇಪಣೆ ಸಲ್ಲಿಸುವಂತೆ ಜೆಪಿಸಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹೇಳಲಾಗಿತ್ತು.

“ಸಾರ್ವಜನಿಕರಿಂದ ಸಲಹೆ ಕೇಳುವ ಸರ್ಕಾರದ ಪ್ರಯತ್ನವು ಶ್ಲಾಘನೀಯವಾಗಿದ್ದರೂ, ಸಲಹೆಗಳನ್ನು ಕೋರುವ ಅಧಿಸೂಚನೆಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳ ಪರಿಚಯವಿಲ್ಲದ ಜನರಿಗೆ ತಲುಪದಿದ್ದರೆ ಅದು ನಿಷ್ಪ್ರಯೋಜಕವಾಗುತ್ತದೆ. ತಿದ್ದುಪಡಿ ಮಸೂದೆ ಅಥವಾ ಮಾಧ್ಯಮ ಹೇಳಿಕೆಯನ್ನು ಇಂಗ್ಲಿಷ್‌, ಹಿಂದಿ ಅಲ್ಲದೇ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡದಿದ್ದರೆ ಸಲಹೆ ಆಹ್ವಾನದ ಉದ್ದೇಶವು ವಿಫಲವಾಗುತ್ತದೆ” ಎಂದು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ ಎಸ್‌ ರಮೇಶ್‌ ಮತ್ತು ಪಿ ಟಿ ಆಶಾ ಅವರ ನೇತೃತ್ವದ ವಿಭಾಗೀಯ ಪೀಠವು ಮೇ 24ರ ಆದೇಶದಲ್ಲಿ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಜೆಪಿಸಿಯ ಮಾಧ್ಯಮ ಹೇಳಿಕೆ ಮತ್ತು ಆನಂತರದ ಪ್ರಕ್ರಿಯೆಗೆ (ಸಾರ್ವಜನಿಕ ವಿಚಾರಣೆ) ಜೂನ್‌ 16ರವರೆಗೆ ತಡೆ ನೀಡಿತ್ತು. ಈಗ ಇದನ್ನು ಸುಪ್ರೀಂ ಕೋರ್ಟ್‌ ತೆರೆವುಗೊಳಿಸಿದೆ.

Kannada Bar & Bench
kannada.barandbench.com