ಡಬ್ಲ್ಯೂಎಫ್‌ಐ ಕಾರ್ಯಕಾರಿ ಸಮಿತಿ ಚುನಾವಣೆಗೆ ಗುವಾಹಟಿ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ

ಕಳೆದು ತಿಂಗಳು ಭಾನುವಾರ ನಡೆದಿದ್ದ ವಿಶೇಷ ವಿಚಾರಣೆ ವೇಳೆ ಅಸ್ಸಾಂ ಕುಸ್ತಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ಗುವಾಹಟಿ ಹೈಕೋರ್ಟ್ ಚುನಾವಣೆಗೆ ತಡೆ ನೀಡಿತ್ತು.
Supreme Court of India
Supreme Court of India

ಭಾರತೀಯ ಕುಸ್ತಿ ಒಕ್ಕೂಟದ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಗುವಾಹಟಿ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ [ಆಂಧ್ರ ಪ್ರದೇಶ ಅಮೆಚೂರ್‌ ರೆಸ್ಲಿಂಗ್‌ ಅಸೋಸಿಯೇಷನ್‌ ಮತ್ತು ಅಸ್ಸಾಂ ಕುಸ್ತಿ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಆಂಧ್ರಪ್ರದೇಶ ಅಮೆಚೂರ್ ರೆಸ್ಲಿಂಗ್ ಅಸೋಸಿಯೇಷನ್ ಮನವಿ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಎಸ್‌ ವಿ ಭಟ್ಟಿ ಅವರಿದ್ದ ಪೀಠ ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕೆ ತಡೆ ನೀಡಿತು.

ಕಳೆದು ತಿಂಗಳು ಭಾನುವಾರ ನಡೆದಿದ್ದ ವಿಶೇಷ ವಿಚಾರಣೆ ವೇಳೆ ತನ್ನನ್ನು ಡಬ್ಲ್ಯೂಎಫ್‌ಐ ಜೊತೆ ಸಂಯೋಜನೆಗೊಳಿಸಲು ವಿಫಲವಾದ್ದರಿಂದ ತಾನು ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿ ಅಸ್ಸಾಂ ಕುಸ್ತಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್‌ ಚುನಾವಣೆಗೆ ತಡೆ ನೀಡಿತ್ತು.

ಈ ಆದೇಶ ಪ್ರಶ್ನಿಸಿ ವಕೀಲ ಅನುಜ್ ತ್ಯಾಗಿ ಅವರ ಮೂಲಕ ಆಂಧ್ರ ಪ್ರದೇಶ ಅಮೆಚೂರ್‌ ರೆಸ್ಲಿಂಗ್‌ ಅಸೋಸಿಯೇಷನ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮೂರನೇ ಪಕ್ಷಕಾರ (ಅಸ್ಸಾಂ ಕುಸ್ತಿ ಸಂಘ) ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ಚುನಾವಣೆಗೆ ತಡೆ ನೀಡಿರುವುದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿತ್ತು.

ರಾಜ್ಯಗಳ ನಡುವಿನ ವಿವಾದ ಬಗೆಹರಿದಿದ್ದರೂ ಸಹ ಚುನಾವಣೆಯನ್ನು ಮರು ನಿಗದಿಪಡಿಸಬೇಕಿದೆ. ಏಕೆಂದರೆ ನಿನ್ನೆ ಹೈಕೋರ್ಟ್‌ನ ತಡೆಯಾಜ್ಞೆಯನ್ನು ವಿಸ್ತರಿಸಿದೆ ಎಂದು ಸಂಘದ ಪರ ವಕೀಲರು ವಾದಿಸಿದರು. ಈ ವಾದ ಪರಿಗಣಿಸಿ ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡುವುದರ ಜೊತೆಗೆ ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕೆ ತಡೆ ನೀಡಿತು.

Kannada Bar & Bench
kannada.barandbench.com