ಪೆಗಸಸ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಂದಿನ ವಾರ ಸಮಗ್ರ ಆದೇಶ ನೀಡುವ ಸಾಧ್ಯತೆಯಿದೆ.
ಹಗರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಅವರ ನೇತೃತ್ವದಲ್ಲಿ ದ್ವಿಸದಸ್ಯ ವಿಚಾರಣಾ ಆಯೋಗ ರಚಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ಆಲಿಸುವಾಗ ಸಿಜೆಐ ಎನ್ ವಿ ರಮಣ ಈ ನಿರ್ಧಾರ ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆ ನಡೆಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ಧಾರವನ್ನು ಗ್ಲೋಬಲ್ ವಿಲೇಜ್ ಫೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಪ್ರಶ್ನಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಉಳಿದ ಅರ್ಜಿಗಳೊಟ್ಟಿಗೆ ಈ ಮನವಿಯ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ. ಹಗರಣದ ಕುರಿತಂತೆ ವಿವಿಧ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಈ ಕುರಿತು ಪೀಠ ಕೇಂದ್ರಕ್ಕೆ ನೋಟಿಸ್ ನೀಡಿತ್ತು.
ಟ್ರಸ್ಟ್ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಮುಂದಿನ ವಾರ ಸುಪ್ರೀಂಕೋರ್ಟ್ ಮನವಿಯನ್ನು ಆಲಿಸುವವರೆಗೆ ತನಿಖಾ ಆಯೋಗ ತನಿಖೆ ಮುಂದುವರೆಸಬಾರದು ಎಂದು ಕೋರಿದರು. ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಆರಂಭದಲ್ಲಿ ಇದನ್ನು ವಿರೋಧಿಸಿದರು.
ಆದರೆ ಮುಂದಿನ ವಾರ ಸಮಗ್ರ ಆದೇಶ ನೀಡಲಾಗುವುದು. ಈ ಮಧ್ಯೆ ನ್ಯಾ. ಲೋಕೂರ್ ಆಯೋಗ ತನಿಖೆ ಮುಂದುವರೆಸಿದರೆ ಇಂದೇ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.
ಆಗ 'ತನಿಖೆ ನಡೆಯುವುದಿಲ್ಲ' ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ ಡಾ. ಸಿಂಘ್ವಿ ಈ ಸಂಬಂಧ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಬಳಿಕ ನೋಟಿಸ್ ನೀಡಿದ ನ್ಯಾಯಾಲಯ ಪ್ರಕರಣವನ್ನು ಉಳಿದ ಅರ್ಜಿಗಳೊಂದಿಗೆ ಸೇರಿಸಿತು. ಮುಂದಿನ ವಾರ ಹಗರಣದ ವಿಚಾರಣೆ ನಡೆಯಲಿದೆ.