ಮಹುವಾ ಉಚ್ಚಾಟನೆ: ಪ್ರತಿಕ್ರಿಯಿಸುವಂತೆ ಲೋಕಸಭಾ ಸಚಿವಾಲಯಕ್ಕೆ ಸುಪ್ರೀಂ ಸೂಚನೆ; ಮಧ್ಯಂತರ ಪರಿಹಾರಕ್ಕೆ ನಕಾರ

ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದ ಸಂಸದರಾಗಿದ್ದ ಮೊಯಿತ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ನಿರಾಕರಿಸಿತು.
ಮಹುವಾ ಮೊಯಿತ್ರಾ ಮತ್ತು ಸುಪ್ರೀಂ ಕೋರ್ಟ್
ಮಹುವಾ ಮೊಯಿತ್ರಾ ಮತ್ತು ಸುಪ್ರೀಂ ಕೋರ್ಟ್ಫೇಸ್ ಬುಕ್

‌ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಲೋಕಸಭಾ ಸಚಿವಾಲಯಕ್ಕೆ ಸೂಚಿಸಿದೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದ ಸಂಸದರಾಗಿದ್ದ ಮೊಯಿತ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ನಿರಾಕರಿಸಿತು.

ಲೋಕಸಭಾ ಸಚಿವಾಲು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು. ಅದಕ್ಕೆ ಪ್ರತ್ಯುತ್ತರವನ್ನು ನಂತರದ ಮೂರು ವಾರಗಳಲ್ಲಿ ಮಹುವಾ ಅವರು ನೀಡಲಿ ಎಂದು ತಿಳಿಸಿರುವ ಪೀಠ ಪ್ರಕರಣವನ್ನು ಮಾರ್ಚ್‌ 11ಕ್ಕೆ ಪಟ್ಟಿ ಮಾಡುವಂತೆ ನಿರ್ದೇಶಿಸಿದೆ.

ಲೋಕಸಭಾ ಸಚಿವಾಲಯದಿಂದ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆಯನ್ನು ಕೇಳಿತಾದರೂ ಈ ಸಂಬಂಧ ಯಾವುದೇ ಔಪಚಾರಿಕ ನೋಟಿಸ್‌ ನೀಡಲಿಲ್ಲ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನೋಟಿಸ್‌ ನೀಡಿಕೆ ವಿಚಾರದಲ್ಲಿ ಪ್ರತಿಭಟಿಸಿದರು.

ಸಂವಿದಾನದ ಅಡಿ ಬರುವ ಮೂರು ಸಾರ್ವಭೌಮ ಅಂಗಗಳಲ್ಲಿ ಸಂಸತ್ತು ಒಂದಾಗಿದೆ. ಅದು ತನ್ನ ಸದಸ್ಯರಿಗೆ ಸಂಬಂಧಿಸಿದ ಶಿಸ್ತು ಕ್ರಮದ ವಿಚಾರವನ್ನು ತನ್ನ ಆಂತರಿಕ ಪ್ರಕ್ರಿಯೆ ಮೂಲಕ ನಿರ್ವಹಿಸಲು ಸಮರ್ಥವಾಗಿದ್ದು, ಇದರಲ್ಲಿ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿಲ್ಲ ಎಂದು ವಾದಿಸಿದರು. "ಸಾಕ್ಷ್ಯದ ಆಧಾರದಲ್ಲಿ ಸಾರ್ವಭೌಮ ಅಂಗವು ತನ್ನ ಆಂತರಿಕ ಶಿಸ್ತು ಕ್ರಮದ ವಿಚಾರವನ್ನು ನಿರ್ಧರಿಸುತ್ತಿದೆ," ಎಂದು ಅವರು ಈ ವೇಳೆ ವಿರೋಧಿಸಿದರು.

ಮಧ್ಯಂತರ ಪರಿಹಾರ ಕುರಿತು ವಾದಿಸುವುದಾಗಿ ಮಹುವಾ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಕೋರಿದರು. ಆದರೆ ಆ ವಿಚಾರವನ್ನು ಮುಂದಿನ ವಿಚಾರಣೆ ವೇಳೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿತು.

ಮಧ್ಯಂತರ ಪರಿಹಾರದ ಮನವಿಯ ಬಗ್ಗೆ ನ್ಯಾಯಾಲಯ ಔಪಚಾರಿಕ ನೋಟಿಸ್ ನೀಡಿಲ್ಲವಾದರೂ ಲೋಕಸಭಾ ಸಚಿವಾಲಯದ ಪ್ರತಿಕ್ರಿಯೆ ಪರಿಶೀಲಿಸಿದ ನಂತರ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದೆ. ಇತ್ತ ಫೆಬ್ರವರಿಯಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಸಿಂಘ್ವಿ ಅವರು ಮಾಡಿದ ಮನವಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತು.

ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಅವರ ಪ್ರತಿಸ್ಪರ್ಧಿಯಾದ ಅದಾನಿ ಸಮೂಹದ ಬಗ್ಗೆ ಮೊಯಿತ್ರಾ ಸಂಸತ್ತಿನಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿದ್ದರು ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಅವರು ಹಿರಾನಂದಾನಿ ಜೊತೆಗೆ ತಮ್ಮ ಲೋಕಸಭಾ ಲಾಗ್-ಇನ್ ಮಾಹಿತಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಮೊಯಿತ್ರಾ ತಪ್ಪಿತಸ್ಥೆ ಎಂದು ಘೋಷಿಸಿದ್ದ ಸಂಸತ್ತಿನ ನೈತಿಕ ಸಮಿತಿ ಆಕೆಯ ಲೋಪಗಳಿಗೆ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ ಮೊಯಿತ್ರಾ ಅವರನ್ನು ಸಂಸತ್‌ನಿಂದ ಉಚ್ಚಾಟಿಸಲಾಗಿತ್ತು. ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಇಂದಿನ ವಿಚಾರಣೆ ವೇಳೆ ಸಿಂಘ್ವಿ ಅವರು "ತಮ್ಮ ಲಾಗಿನ್‌ ಐಡಿ ಹಂಚಿಕೊಂಡ ಮಾತ್ರಕ್ಕೇ ಮಹುವಾ ಅವರನ್ನು ಉಚ್ಚಾಟಿಸಲಾಗಿದೆ. ಆಕೆ ಲಂಚ ಪಡೆದ ಆರೋಪಗಳನ್ನು ಪರಿಶೀಲಿಸಬೇಕಿದೆ ಎನ್ನಲಾಗುತ್ತಿದೆ. ಪಾಸ್‌ವರ್ಡ್‌ ಹಂಚಿಕೆ ಕುರಿತು ಯಾವುದೇ ನಿಯಮ ಇಲ್ಲದಿದ್ದರೂ ಆಕೆಯನ್ನು ಉಚ್ಚಾಟಿಸಲಾಗಿದೆ. ಸಾಕ್ಷಿಗಳ ವಿಚಾರಣೆ ನಡೆಸಲು ಮೊಯಿತ್ರಾ ಅವರಿಗೆ ಅವಕಾಶ ನೀಡಲಿಲ್ಲ. ಪಾಟಿ ಸವಾಲು ಅಗತ್ಯವಾಗಿದೆ ಎಂದರು.

ಅನೇಕ ಸಂಸದರು ಮಾಡುವಂತೆಯೇ ಪಾಸ್‌ವರ್ಡನ್ನು ಮಹುವಾ ಹಂಚಿಕೊಂಡಿದ್ದಾರೆ ಎಂದು ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಸಿಂಘ್ವಿ ಪ್ರತಿಕ್ರಿಯಿಸಿದರು.

ನಂತರ ಲೋಕಸಭಾ ಸಚಿವಾಲಯದ ಪ್ರತಿಕ್ರಿಯೆ ಪಡೆಯಲು ಮುಂದಾದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್‌ಗೆ ಮುಂದೂಡಿತು.

ಮಹುವಾ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದ ಬಿಜೆಪಿಯ ನಿಶಿಕಾಂತ್ ದುಬೆ ಅವರ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ಮತ್ತು ವಕೀಲ ಅಭಿಮನ್ಯು ಭಂಡಾರಿ ಅವರು ಹಾಜರಿದ್ದರು. ಮೊಯಿತ್ರಾ ಅವರನ್ನು ಮತ್ತೊಬ್ಬ ವಕೀಲ ಶದನ್ ಫರಾಸತ್ ಪ್ರತಿನಿಧಿಸಿದ್ದರು.

ಪ್ರತ್ಯೇಕ ಪ್ರಕರಣವೊಂದರಲ್ಲಿ ಜನವರಿ 7 ರೊಳಗೆ ದೆಹಲಿಯಲ್ಲಿ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿರುವುದನ್ನು ಮಹುವಾ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ದುಬೆ ಮತ್ತು ಮಹುವಾ ಅವರ ಮಾಜಿ ಸ್ನೇಹಿತ ಹಾಗೂ ವಕೀಲ ಜೈ ಅನಂತ್ ದೆಹದ್ರಾಯ್ ವಿರುದ್ಧ ಆಕೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ನೀಡುವ ಕುರಿತು ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

Related Stories

No stories found.
Kannada Bar & Bench
kannada.barandbench.com