ಶಾಸಕರ ಅನರ್ಹತೆ: ವಾರದೊಳಗೆ ವಿಚಾರಣಾ ಪ್ರಕ್ರಿಯೆ ಕಾಲನುಕ್ರಮಣಿಕೆ ಸಲ್ಲಿಸಲು ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ಸೂಚನೆ

"ಸಾಂವಿಧಾನಿಕ ಅಧಿಕಾರ ಬಳಸಿಕೊಂಡು ಹೊರಡಿಸಲಾದ ನಿರ್ದೇಶನಗಳಿಗೆ ಗೌರವ ಮತ್ತು ಘನತೆ ದೊರೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
Uddhav thackeray, Eknath shinde and Supreme court
Uddhav thackeray, Eknath shinde and Supreme court

ಶಿವಸೇನೆ ಬಂಡಾಯ ಶಾಸಕರಿಗೆ ಸಂಬಂಧಿಸಿದ ವಿವಿಧ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಅಗತ್ಯವಾದ ಕಾರ್ಯವಿಧಾನ ಮತ್ತು ಪ್ರಕ್ರಿಯೆಗಳ ನಿರ್ದೇಶನ ಕುರಿತಾದ ಕಾಲಾನುಕ್ರಮಣಿಕೆಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಕೋರ್ಟ್ ಸೋಮವಾರ ಸೂಚಿಸಿದೆ [ಸುನಿಲ್ ಪ್ರಭು ಮತ್ತು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ನಡುವಣ ಪ್ರಕರಣ].

ಮೇ ತಿಂಗಳಿನಿಂದ ಬಾಕಿ ಉಳಿದಿರುವ ಅರ್ಜಿಗಳ ವಿಚಾರಣೆ ಪ್ರಕ್ರಿಯೆ ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುವಂತಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

“ಸ್ಪೀಕರ್‌ ಅವರು ವಿವೇಚನಾಯಕ್ತ ಕಾಲಮಿತಿಯೊಳಗೆ ವಿಚಾರಣೆ ಕುರಿತು ನಿರ್ಧರಿಸಬೇಕು ಎಂದು ಈ ನ್ಯಾಯಾಲಯದ ಆದೇಶ ಬಯಸುತ್ತದೆ. ಸಾಂವಿಧಾನಿಕ ಅಧಿಕಾರ ಬಳಸಿಕೊಂಡು ಹೊರಡಿಸಲಾದ ನಿರ್ದೇಶನಗಳಿಗೆ ಗೌರವ ಮತ್ತು ಘನತೆ ದೊರೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನೊಂದು ವಾರದೊಳಗೆ ಕಾರ್ಯವಿಧಾನದ ನಿರ್ದೇಶನಗಳನ್ನು ಸ್ಪೀಕರ್ ನೀಡಬೇಕು ಎಂದು ನಿರ್ದೇಶಿಸುತ್ತಿದ್ದೇವೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಚಾರಣೆಯನ್ನು ವಿಲೇವಾರಿ ಮಾಡಲು ಕಾಲಮಿತಿ ಏನು ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕು” ಎಂದು ಪೀಠ ಹೇಳಿದೆ.

ಶಿವಸೇನೆಯ ಎರಡು ಬಣಗಳ ಶಾಸಕರಿಗೆ ಸಂಬಂಧಿಸಿದಂತೆ ಬಾಕಿ ಇರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸಬೇಕೆಂಬ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ.  

ಮನವಿಗೆ ಸಂಬಂಧಿಸಿದಂತೆ ಕಳೆದ ಜುಲೈನಲ್ಲಿ ನ್ಯಾಯಾಲಯ ಪ್ರಕರಣದ ಸಂಬಂಧ ಸ್ಪೀಕರ್‌ ಪ್ರತಿಕ್ರಿಯೆ ಕೇಳಿತ್ತು. ಎನ್‌ಸಿಪಿ ನಾಯಕ ಅಜಿತ್ ಪವಾರ್,  ಪ್ರಫುಲ್ ಪಟೇಲ್ ಹಾಗೂ ಛಗನ್ ಭುಜಬಲ್ ಸೇರಿದಂತೆ ಎಂಟು ಶಾಸಕರು ಏಕನಾಥ್ ಶಿಂಧೆ ಬಣಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಉದ್ಧವ್ ಠಾಕ್ರೆ ಬಣದ ಶಾಸಕ ಸುನಿಲ್ ಪ್ರಭು ಅವರು ಮನವಿ ಸಲ್ಲಿಸಿದ್ದರು.

ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ಸೂಕ್ತ ಅವಧಿಯಲ್ಲಿ ನಿರ್ಧರಿಸುವಂತೆ ಸ್ಪೀಕರ್‌ಗೆ ಮೇ 11ರಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಸೂಚಿಸಿತ್ತು. ಆದರೆ, ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಭು ದೂರಿದ್ದರು.

ಸ್ಪೀಕರ್‌ ಅವರು ತ್ವರಿತವಾಗಿ ಅನರ್ಹತೆ ಪ್ರಕರಣವನ್ನು ಇತ್ಯರ್ಥಪಡಿಸುವುದು ನ್ಯಾಯೋಚಿತವಾದ ಸಾಂವಿಧಾನಿಕ ಅವಶ್ಯಕತೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

“ಅನರ್ಹತೆಯ ಪ್ರಕ್ರಿಯೆಗಳನ್ನು ನಿರ್ಧರಿಸುವಲ್ಲಿನ ಸ್ಪೀಕರ್‌ ಅವರ ನಿಷ್ಕ್ರಿಯತೆಯು ಗಂಭೀರವಾದ ಸಾಂವಿಧಾನಿಕ ಅನೌಚಿತ್ಯವಾಗಿದೆ" ಎಂಬುದು ಪ್ರಭು ಅವರ ವಾದವಾಗಿತ್ತು.

ಇಂದಿನ ವಿಚಾರಣೆ ವೇಳೆ ಅನಹರ್ತೆ ಅರ್ಜಿಗಳ ವಿಚಾರಣೆ ಸಂಬಂಧ ಮೇ ತಿಂಗಳಿನಿಂದ ಏನೂ ನಡೆದಿಲ್ಲ ಎಂದು ತೋರುತ್ತದೆ ಎಂದು ಸಿಜೆಐ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕ ರಾಹುಲ್ ನಾರ್ವೇಕರ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಂಡಾಯ ಶಿವಸೇನೆ ಶಾಸಕರ ಪರವಾಗಿ ಹಿರಿಯ ವಕೀಲರಾದ ನೀರಜ್ ಕಿಶನ್ ಕೌಲ್, ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ಅರ್ಜಿದಾರ ಪ್ರಭು ಅವರನ್ನು ಹಿರಿಯ ವಕೀಲ ಕಪಿಲ್‌ ಸಿಬಲ್‌ ಪ್ರತಿನಿಧಿಸಿದರು. ಎರಡು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಸಿಜೆಐ ತಿಳಿಸಿದ್ದಾರೆ.

Kannada Bar & Bench
kannada.barandbench.com