ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗು ಪಡೆಯಲು ನಿಷೇಧ: ಕಾಯಿದೆಯ ಸಿಂಧುತ್ವ ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್‌

ಮೊದಲ ಸಂತಾನದ ನಂತರ ಬಂಜೆತನ ಎದುರಿಸುತ್ತಿರುವ ದಂಪತಿಯು ಬಾಡಿಗೆ ತಾಯ್ತನದ ಸೌಲಭ್ಯ ಪಡೆಯುವುದನ್ನು ನಿರ್ಬಂಧಿಸುತ್ತದೆ ಬಾಡಿಗೆ ತಾಯ್ತನ ಕಾಯಿದೆ.
Supreme Court
Supreme Court
Published on

ವಿವಾಹಿತ ದಂಪತಿ ಈಗಾಗಲೇ ಆರೋಗ್ಯವಂತ ಮೊದಲ ಮಗು ಪಡೆದಿದ್ದರೆ ಅಂತಹವರು ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗುವನ್ನು ಪಡೆಯುವುದನ್ನು ತಡೆಯುವ ಕಾಯಿದೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಅರ್ಜಿದಾರರ ಪರ ವಕೀಲೆ ಮೋಹಿನಿ ಪ್ರಿಯಾ ಅವರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ಕೇಂದ್ರಕ್ಕೆ ಈ ಸಂಬಂಧ ನೋಟಿಸ್‌ ನೀಡಿತು.

ಎರಡನೇ ಬಂಜೆತನ (ಮೊದಲ ಸಂತಾನದ ನಂತರ ಮತ್ತೊಂದು ಮಗು ಪಡೆಯಲು ಎದುರಾಗುವ ಬಂಜೆತನದ ಸಮಸ್ಯೆ) ಎದುರಿಸುತ್ತಿರುವ ದಂಪತಿ ಬಾಡಿಗೆ ತಾಯ್ತನ ಸೌಲಭ್ಯ ಪಡೆಯುವುದನ್ನು ಬಾಡಿಗೆ ತಾಯ್ತನ ಕಾಯಿದೆ ನಿರ್ಬಂಧಿಸುತ್ತದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ರ ಸೆಕ್ಷನ್ 4 (iii) (ಸಿ) (ii) ಪ್ರಕಾರ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಯಸುವವರು ತಾವು ಜೀವಂತ ಮಗುವನ್ನು - ಜೈವಿಕವಾಗಿಯಾಗಲಿ, ಬಾಡಿಗೆ ತಾಯ್ತನದ ಮೂಲಕ ಪಡೆದಿರುವುದಾಗಲಿ ಅಥವಾ ದತ್ತು ಪಡೆದಿರುವುದಾಗಲಿ - ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುವಂತಹ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಈ ನಿರ್ಬಂಧವನ್ನು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಎರಡನೇ ಮಗುವಿಗಾಗಿ ಗರ್ಭ ಧರಿಸಲು ಸಾಧ್ಯವಾಗದ ವಿವಾಹಿತ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಸಂತಾನೋತ್ಪತ್ತಿ ಆಯ್ಕೆ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

  • ಜನರ ಖಾಸಗಿ ಬದುಕಿನಲ್ಲಿ ಪ್ರಭುತ್ವ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು.

  • ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ರ ಸೆಕ್ಷನ್ 4 (iii) (ಸಿ) (ii)ಗೆ ಯಾವುದೇ ತರ್ಕಬದ್ಧ ಆಧಾರ ಇಲ್ಲದ ಕಾರಣ ಅದನ್ನು ರದ್ದುಗೊಳಿಸಬೇಕು.

  • ಇಬ್ಬರು ಮಕ್ಕಳಿದ್ದರೆ ಅವರಲ್ಲಿ ಹಂಚಿಬದುಕುವ ಹಾಗೂ ಕಾಳಜಿ ತೋರುವ ಮೌಲ್ಯಗಳನ್ನು ಕಲಿಸಲು ಸಹಾಯಕವಾಗುತ್ತದೆ. ಕೌಟುಂಬಿಕ ಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ.

  • ಜೀವಿಸುತ್ತಿರುವ ಮಗು ತನ್ನಂತೆ ತಳೀಯ ನಂಟು ಇರುವ ಒಡಹುಟ್ಟಿದವರನ್ನು ಪಡೆಯಲು ಇದು ಸಹಕಾರಿ.

  • ಮೂಳೆ ಮಜ್ಜೆ, ಅಂಗಾಂಶ ಅಥವಾ ಅಂಗಗಳ ಅಗತ್ಯತೆ ಉಂಟಾದ ಸಂದರ್ಭದಲ್ಲಿ ಜೈವಿಕವಾಗಿ ಒಡಹುಟ್ಟಿದವರು ಇರುವುದು ಉಪಯುಕ್ತ.

  • ಬಾಡಿಗೆ ತಾಯ್ತನದ ಮೂಲಕ ದಂಪತಿ ಎರಡನೇ ಮಗು ಪಡೆಯಲು ನ್ಯಾಯಾಲಯ ಅವಕಾಶ ನೀಡಬೇಕು.

ಮತ್ತೊಂದೆಡೆ ವಾಣಿಜ್ಯ ಬಾಡಿಗೆ ತಾಯ್ತನ ನಿಷೇಧ ಪ್ರಶ್ನಿಸಿದ್ದ ವಿವಿಧ ಪಿಐಎಲ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. ಅರ್ಜಿದಾರರು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021 ಹಾಗೂ  ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021ರ ಸಿಂಧುತ್ವವನ್ನು ಪ್ರಮುಖವಾಗಿ ಪ್ರಶ್ನಿಸಿದ್ದಾರೆ.

Kannada Bar & Bench
kannada.barandbench.com