ಮುಸ್ಲಿಂ ವೈಯಕ್ತಿಕ ಕಾನೂನು: 15 ವರ್ಷ ಮೀರಿದ ಮುಸ್ಲಿಂ ಹುಡುಗಿಯರು ಮದುವೆಯಾಗಬಹುದೇ ಎಂಬುದ ಪರಿಶೀಲಿಸಲಿರುವ ಸುಪ್ರೀಂ

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ 15 ವರ್ಷ ಮೇಲ್ಪಟ್ಟ ಮುಸ್ಲಿಂ ಹುಡುಗಿ ವಿವಾಹ ಒಪ್ಪಂದ ಮಾಡಿಕೊಳ್ಳಲು ಅರ್ಹಳು ಎಂದು ತೀರ್ಪು ನೀಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ.
Supreme Court
Supreme Court

ಹದಿನೈದು ವರ್ಷ ವಯಸ್ಸಿನ ಮುಸ್ಲಿಂ ಹುಡುಗಿ ತಾನು ಬಯಸಿದ ವ್ಯಕ್ತಿಯೊಂದಿಗೆ ಮದುವೆಯಾಗಬಹುದೇ ಎಂಬುದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠವು ಈ ಪ್ರಕರಣದಲ್ಲಿ ಹಿರಿಯ ವಕೀಲ ರಾಜಶೇಖರ್ ರಾವ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ 15 ವರ್ಷ ಮೇಲ್ಪಟ್ಟ ಮುಸ್ಲಿಂ ಹುಡುಗಿ ವಿವಾಹ ಒಪ್ಪಂದ ಮಾಡಿಕೊಳ್ಳಲು ಅರ್ಹಳು ಎಂದು ಜೂನ್ 13ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ.

Also Read
ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣ: ಭಿನ್ನ ತೀರ್ಪು ನೀಡಿದ ಸುಪ್ರೀಂ; ವಿಸ್ತೃತ ಪೀಠಕ್ಕೆ ಪ್ರಕರಣ

" ವಿವಿಧ ತೀರ್ಪುಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿತ ಎಂಬುದು ಸ್ಪಷ್ಟವಾಗಿದೆ. ಸರ್ ದಿನ್‌ಶಾ ಫರ್ದುಂಜಿ ಮುಲ್ಲಾ ಅವರು ಬರೆದಿರುವ 'ಪ್ರಿನ್ಸಿಪಲ್ಸ್‌ ಆಫ್‌ ಮೊಹಮ್ಮಡನ್ ಲಾ' ಎಂಬ ಪುಸ್ತಕದ 195ನೇ ವಿಧಿ ಪ್ರಕಾರ, ಎರಡನೇ ಅರ್ಜಿದಾರರು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರ ತಮ್ಮ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದ ಮಾಡಿಕೊಳ್ಳಲು ಸಮರ್ಥರಾಗಿದ್ದರು,'' ಎಂದು ಹೈಕೋರ್ಟ್ ತೀರ್ಪು ನೀಡಿತ್ತು.  

ಸೋಮವಾರ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆದೇಶದ ಸಂಬಂಧಪಟ್ಟ ಪ್ಯಾರಾಗಳಿಗೆ ತಡೆ ನೀಡುವಂತೆ ಕೋರಿದರು. ಆಗ ಪ್ರಕರಣದಲ್ಲಿ ತನಗೆ ಸಹಾಯ ಮಾಡಲು ಅಮಿಕಸ್‌ ಅವರನ್ನು ನೇಮಿಸಲು ಮುಂದಾದ ನ್ಯಾಯಾಲಯ ನವೆಂಬರ್‌ 7ಕ್ಕೆ ಪ್ರಕರಣ ಮುಂದೂಡಿತ್ತು.

ಇತ್ತೀಚೆಗೆ ದೆಹಲಿ ಹೈಕೋರ್ಟ್‌ ಕೂಡ ಪಂಜಾಬ್‌ ಹೈಕೋರ್ಟ್‌ನಂತಹುದೇ ತೀರ್ಪು ನೀಡಿತ್ತು. ಮುಸ್ಲಿಂ ಕಾನೂನಿನ ಪ್ರಕಾರ, ಪ್ರಾಯಕ್ಕೆ ಬಂದ ಅಪ್ರಾಪ್ತ ಬಾಲಕಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು. ಅಂತಹ ಸಂದರ್ಭದಲ್ಲಿ ಮದುವೆಯ ನಂತರ ಸಂಭೋಗ ನಡೆದಿದ್ದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (POCSO) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅದು ಹೇಳಿತ್ತು.  

Related Stories

No stories found.
Kannada Bar & Bench
kannada.barandbench.com