ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರ ನೇಮಕಾತಿ ಪ್ರಕ್ರಿಯೆ ನಿರ್ವಹಣೆಗಾಗಿ 2023ರ ಸರ್ವೋಚ್ಚ ನ್ಯಾಯಾಲಯ ಹಿರಿಯ ನ್ಯಾಯವಾದಿಗಳ ಆಯ್ಕೆ ಮಾರ್ಗಸೂಚಿ ಹೆಸರಿನಡಿ ನೂತನ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಈ ಮಾರ್ಗಸೂಚಿಯಿಂದಾಗಿ 2018ರಲ್ಲಿ ಹೊರಡಿಸಲಾಗಿದ್ದ ಮಾರ್ಗಸೂಚಿಗಳು ರದ್ದುಗೊಳ್ಳಲಿವೆ. ಗಮನಾರ್ಹವಾಗಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 45 ವರ್ಷ ವಯಸ್ಸಾಗಿರಬೇಕು ಎಂದು 2023ರ ಮಾರ್ಗಸೂಚಿ ಹೇಳುತ್ತದೆ.
ಆದರೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಥವಾ ನ್ಯಾಯಮೂರ್ತಿಗಳು ಹೆಸರು ಶಿಫಾರಸು ಮಾಡಿದರೆ ಈ ವಯೋಮಿತಿ ಅನ್ವಯವಾಗದು. ಹಿರಿಯ ಹುದ್ದೆಗಳನ್ನು ನಿರ್ಧರಿಸುವ ಸುಪ್ರೀಂ ಕೋರ್ಟ್ ಸಮಿತಿಯು ವಯಸ್ಸಿನ ಮಾನದಂಡವನ್ನು ಸಡಿಲಗೊಳಿಸಬಹುದು.
ಹಿರಿಯ ವಕೀಲರ ಹುದ್ದೆಗೆ ಸಂಬಂಧಿಸಿದಂತೆ ಹೂಡಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದ ಎರಡು ತಿಂಗಳ ಬಳಿಕ ಹೊಸ ಮಾರ್ಗಸೂಚಿ ರೂಪಿಸಲಾಗಿದೆ. ಮೇ 2023ರಲ್ಲಿ ಪೀಠ ನೀಡಿದ್ದ ತೀರ್ಪಿನಲ್ಲಿ, ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನುಸರಿಸಿದ ಸಂದರ್ಶನದ ಮಾನದಂಡಗಳನ್ನು ಎತ್ತಿಹಿಡಿಯಲಾಗಿತ್ತು. ಆದರೆ ವಿದ್ವತ್ ಪ್ರಕಟಣೆಗಳ ಸಂಖ್ಯೆಗೆ ನೀಡಲಾದ ಅಂಕಗಳನ್ನು 15ರಿಂದ 5ಕ್ಕೆ ಇಳಿಸಿತ್ತು.
ಹೀಗಾಗಿ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಪರಿಷ್ಕೃತ ಅಂಕ ವ್ಯವಸ್ಥೆಯನ್ನು ಹೊಸ ಮಾರ್ಗಸೂಚಿ ಒಳಗೊಂಡಿದೆ, ವಿದ್ವತ್ ಪ್ರಕಟಣೆಗಳಿಗೆ ನೀಡಲಾದ ಅಂಕಗಳನ್ನು 5ಕ್ಕೆ ಇಳಿಸಲಾಗಿದೆ. ಮೇಲಾಗಿ, ಪ್ರಕಟಣೆಗಳ ಜೊತೆಗೆ, ಮೌಲ್ಯಮಾಪನಕ್ಕಾಗಿ ಬೋಧನಾ ಅನುಭವವನ್ನು ಸಹ ಪರಿಗಣಿಸಲಾಗುತ್ತದೆ.
ತೀರ್ಪುಗಳಿಗಾಗಿ ನೀಡಲಾದ ಅಂಕಗಳನ್ನು ಹಿಂದೆ ಇದ್ದ 40ರ ಮಿತಿ ಬದಲಿಗೆ 50ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಮೇ ತೀರ್ಪಿನಲ್ಲಿ ಅಭಿಪ್ರಾಯಪಟ್ಟಂತೆ ರಹಸ್ಯ ಮತದಾನವನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಆಶ್ರಯಿಸಬೇಕು ಎಂದು ಹೊಸ ಮಾರ್ಗಸೂಚಿ ಹೇಳುತ್ತದೆ.
[ಮಾರ್ಗಸೂಚಿಯ ವಿವರಗಳನ್ನು ಇಲ್ಲಿ ಓದಿ]