ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಕೋರುವ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸುವ ಮೊದಲು ಅಪರಾಧಿ ಕನಿಷ್ಠ ಶಿಕ್ಷೆ ಅನುಭವಿಸಿರಬೇಕು ಎಂಬ ಯಾವುದೇ ಕಟ್ಟುನಿಟ್ಟಿನ ನಿಯಮವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ವಿಷ್ಣುಭಾಯ್ ಗಂಗಪತಭಾಯ್ ಪಟೇಲ್ ಮತ್ತಿತರರು ಹಾಗೂ ಗುಜರಾತ್ ಸರ್ಕಾರ ನಡುವಣ ಪ್ರಕರಣ].
ಈ ಸಂಬಂಧ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಕೊಲೆಗೆ ಸಮನಲ್ಲದ ನರಹತ್ಯೆಗಾಗಿ ಶಿಕ್ಷೆಗೊಳಗಾದ ಇಬ್ಬರು ಅಪರಾಧಿಗಳು ಶಿಕ್ಷೆಯ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಪರಿಗಣಿಸಿತ್ತು. ಈ ವೇಳೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾದ ನಂತರದ ಜೈಲು ಅವಧಿಯನ್ನು ಮಾತ್ರವೇ ಅದು ಲೆಕ್ಕಕ್ಕೆ ತೆಗೆದುಕೊಂಡಿತ್ತು. ಇದನ್ನು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೈಕೋರ್ಟ್ ಶಿಕ್ಷೆ ಪೂರ್ವ ಸೆರೆವಾಸವನ್ನು ಶಿಕ್ಷೆಯ ಅವಧಿಯೆಂದು ಪರಿಗಣಿಸದೇ ಇರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
“ ಶಿಕ್ಷೆ ವಿಧಿಸಿದ ನಂತರದ ಅವಧಿಯನ್ನು ಮಾತ್ರವೇ ಸಜೆ ಎಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಆಶ್ಚರ್ಯಕರ ರೀತಿಯಲ್ಲಿ ವಾದವನ್ನು ಮಂಡಿಸಲಾಗಿದೆ. ಆ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ ಕೂಡ… ಆ ವಿಧಾನ ಸರಿಯಲ್ಲ ಎಂಬ ವಾಸ್ತವಾಂಶದ ಜೊತೆಗೆ, ಶಿಕ್ಷೆ ಅಮಾನತುಗೊಳಿಸುವ ಮುನ್ನ ಅಪರಾಧಿ ಕನಿಷ್ಠ ಸಜೆ ಅನುಭವಿಸಿರಬೇಕು ಎಂಬಂತಹ ನಿರ್ದಿಷ್ಟ ನಿಯಮ ಇಲ್ಲ ಎಂದು ಹೇಳಬಹುದು” ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ವಿವರಿಸಿದೆ.
“ಅಪರಾಧಿಗಳ ಅರ್ಜಿಯನ್ನು ಹೈಕೋರ್ಟ್ ಅವರ ಪರವಾಗಿ ಪರಿಗಣಿಸಬೇಕಿತ್ತು. ಏಕೆಂದರೆ ಅವರು ಯಾವುದೇ ಅಪರಾಧದ ಹಿನ್ನೆಲೆ ಹೊಂದಿಲ್ಲ. ಅವರ ಅಪರಾಧಕ್ಕಾಗಿ ಗರಿಷ್ಠ ಶಿಕ್ಷೆಯ ಶೇಕಡಾ 40 ಕ್ಕಿಂತ ಹೆಚ್ಚು ಸೆರೆವಾಸ ಅನುಭವಿಸಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಹೀಗಾಗಿ ಮನವಿ ಪುರಸ್ಕರಿಸಿ ಆರೋಪಿಗಳನ್ನು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನು ನೀಡುವಂತೆ ಪೀಠ ಸೂಚಿಸಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]