ನ್ಯಾಯಾಂಗ ನಿಂದನೆ ನೋಟಿಸ್‌ ನಿಷ್ಪ್ರಯೋಜಕ, ಅಗೌರವಯುತ ಎಂದಿದ್ದ ದಾವೆದಾರನಿಗೆ ಜಾಮೀನು ರಹಿತ ವಾರಂಟ್ ನೀಡಿದ ಸುಪ್ರೀಂ

"ಸರ್, ನಾನು ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸುತ್ತೇನೆ. ಏಕೆಂದರೆ ಅದು ನೀವು ನನಗೆ ನೀಡಿದ ನಿಷ್ಪ್ರಯೋಜಕ ನೋಟಿಸ್. ಅದು ನೀವು ನನಗೆ ತೋರಿದ ಅಗೌರವ" ಎಂದಿದ್ದ ಕಕ್ಷಿದಾರ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ದಂಡದ ಮೊತ್ತ ಪಾವತಿಸಲು ನಿರಾಕರಿಸಿದ್ದಲ್ಲದೆ ನ್ಯಾಯಾಂಗ ನಿಂದನೆ ನೋಟಿಸನ್ನು ನಿಷ್ಪ್ರಯೋಜಕ, ಅಗೌರವದಾಯಕ ಎಂದಿದ್ದ ಕಕ್ಷಿದಾರನೊಬ್ಬನ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ [ಉಪೇಂದ್ರ ನಾಥ ದಲೈ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ].

ಕಕ್ಷಿದಾರ ಬಳಸಿದ್ದ ಭಾಷೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಆತ ಫೆಬ್ರವರಿ 13ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಒಡಿಶಾದ ಬಾಲಸೋರ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.

ನ್ಯಾಯಾಂಗ ನಿಂದನೆ ವಿಚಾರಣೆಯ ನೋಟಿಸ್‌ಗೆ ಕಕ್ಷಿದಾರ ನೀಡಿದ್ದ ಪ್ರತಿಕ್ರಿಯೆಯನ್ನು ನ್ಯಾ. ರವಿ ಕುಮಾರ್‌ ಓದಿದರು: "ಸರ್, ನಾನು ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸುತ್ತೇನೆ. ಏಕೆಂದರೆ ಅದು ನೀವು ನನಗೆ ನೀಡಿದ ನಿಷ್ಪ್ರಯೋಜಕ ನೋಟಿಸ್. ಅದು ನೀವು ನನಗೆ ತೋರಿದ ಅಗೌರವ".

ಈ ಉತ್ತರಕ್ಕೆ ಕೆಂಡಾಮಂಡಲವಾದ ನ್ಯಾಯಾಲಯ "(ನ್ಯಾಯಾಂಗ ನಿಂದನೆ) ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಮತ್ತೆ ನ್ಯಾಯಾಂಗ ನಿಂದನೆ. ಇದನ್ನು ಮತ್ತೆ ಓದಲು ಬಯಸುವುದಿಲ್ಲ" ಎಂದಿತು.

ಪೀಠ ಮುಂದುವರಿದು "ಜಾಮೀನು ನೀಡಬಹುದಾದ ವಾರೆಂಟ್‌ ನೋಟಿಸ್‌ ನೀಡಲಾಗಿದ್ದರೂ ನ್ಯಾಯಾಂಗ ನಿಂದಕ (ಈ ರೀತಿಯ) ಪ್ರತಿಕ್ರಿಯೆ ನೀಡಿದ್ದಾರೆ. ಫೆಬ್ರವರಿ 13ರಂದು ನ್ಯಾಯಾಂಗ ನಿಂದಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಒಡಿಶಾದ ಬಾಲಸೋರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೂಲಕ ಜಾಮೀನು ರಹಿತ ವಾರೆಂಟ್‌ ನೀಡಬೇಕು" ಎಂದು ಆದೇಶಿಸಿತು.

ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್
ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್

ಸತ್ಸಂಗದ ಸ್ಥಾಪಕ ಶ್ರೀ ಶ್ರೀ ಠಾಕೂರ್ ಅನುಕೂಲಚಂದ್ರ ಅವರನ್ನು ಪರಮಾತ್ಮ ಎಂದು ಘೋಷಿಸಲು ಪಿಐಎಲ್ ಸಲ್ಲಿಸಿದ್ದಕ್ಕಾಗಿ ₹ 1 ಲಕ್ಷ ದಂಡ ಪಾವತಿಸಲು ವಿಫಲನಾಗಿದ್ದ ಉಪೇಂದ್ರ ನಾಥ್‌ ದಲೈ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿತ್ತು.

ಭಾರತ ಜಾತ್ಯತೀತ ದೇಶವಾಗಿದ್ದು ಪಿಐಎಲ್‌ ಮೂಲಕ ಇಂತಹ ತಪ್ಪು ಗ್ರಹಿಕೆಯ ಮನವಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ 2022ರ ಡಿಸೆಂಬರ್‌ನಲ್ಲಿ ಸ್ಪಷ್ಟಪಡಿಸಿತ್ತು. ದಂಡ ಮನ್ನಾಗೊಳಿಸುವಂತೆ ಆತ ಸಲ್ಲಿಸಿದ್ದ ಮತ್ತೊಂದು ಅರ್ಜಿಯೂ ವಜಾಗೊಂಡಿತ್ತು.

ಸೆಪ್ಟೆಂಬರ್ 2023ರಲ್ಲಿ, ನ್ಯಾಯಾಲಯ ದಲೈ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು. ಆದರೆ ಅಂದಿನಿಂದ ಆತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

Related Stories

No stories found.
Kannada Bar & Bench
kannada.barandbench.com