'ಪ್ರತಿ ಆತ್ಮಹತ್ಯೆಗೂ ಪ್ರಚೋದನೆಯೇ ಕಾರಣವಲ್ಲ; ಮನುಷ್ಯರ ಮನಸ್ಸು ನಿಗೂಢ': ಸುಪ್ರೀಂ ಕೋರ್ಟ್‌

ಮಾನವನ ಮನಸ್ಸು ರಹಸ್ಯಗಳಿಂದ ಕೂಡಿರಬಹುದಾಗಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ವಿವಿಧ ಕಾರಣಗಳಿರಬಹುದು ಎಂದು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಪೀಠ ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಆತ್ಮಹತ್ಯೆಯ ಪ್ರತಿಯೊಂದು ಪ್ರಕರಣದಲ್ಲೂ ಯಾರಾದರೂ ಆ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಅಥವಾ ವ್ಯಕ್ತಿಯನ್ನು ಆತ್ಮಹತ್ಯೆಯಿಂದ ಸಾಯುವಂತೆ ಪ್ರೇರೇಪಿಸುವ ಅಂಶ ಇರಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಕುಮಾರ್ ಅಲಿಯಾಸ್‌ ಶಿವಕುಮಾರ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಮಾನವನ ಮನಸ್ಸು ರಹಸ್ಯಗಳಿಂದ ಕೂಡಿರಬಹುದಾಗಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ವಿವಿಧ ಕಾರಣಗಳಿರಬಹುದು ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

"ಮಾನವನ ಮನಸ್ಸು ನಿಗೂಢ. ಮನುಷ್ಯನ ಮನಸ್ಸಿನ ರಹಸ್ಯವನ್ನು ಬಿಚ್ಚಿಡುವುದು ಅಸಾಧ್ಯ. ಒಬ್ಬ ಪುರುಷ ಅಥವಾ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಅಥವಾ ಆತ್ಮಹತ್ಯೆಗೆ ಯತ್ನಿಸಲು ಅಸಂಖ್ಯಾತ ಕಾರಣಗಳಿರಬಹುದು: ಇದು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸುವಲ್ಲಿ ವಿಫಲತೆ, ಕಾಲೇಜು ಅಥವಾ ಹಾಸ್ಟೆಲ್‌ನಲ್ಲಿ ದಬ್ಬಾಳಿಕೆಯ ವಾತಾವರಣ, ವಿಶೇಷವಾಗಿ ಸಮಾಜದ ಕಟ್ಟಕಡೆಯ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಲ್ಲಿ; ಉಳಿದಂತೆ ನಿರುದ್ಯೋಗ, ಆರ್ಥಿಕ ತೊಂದರೆಗಳು, ಪ್ರೀತಿ ಅಥವಾ ಮದುವೆಯಲ್ಲಿ ನಿರಾಶೆ, ತೀವ್ರ ಅಥವಾ ದೀರ್ಘಕಾಲದ ಕಾಯಿಲೆಗಳು, ಖಿನ್ನತೆ ಹೀಗೆ (ಬೇರೆ ಬೇರೆ ಕಾರಣಗಳಿರಬಹುದು). ಆದ್ದರಿಂದ, ಸದಾ ಆತ್ಮಹತ್ಯೆಗೆ ಯಾರದದ್ದಾದರೂ ಪ್ರಚೋದನೆ ಇರುತ್ತದೆ ಎಂದಲ್ಲ. ಮೃತ ವ್ಯಕ್ತಿಯು ಸುತ್ತಲಿನ ಸಂದರ್ಭಗಳು ಪ್ರಸ್ತುತವಾಗಿರುತ್ತವೆ" ಎಂದು ನ್ಯಾಯಪೀಠ ವಿವರಿಸಿದೆ.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಉಜ್ಜಲ್ ಭುಯಾನ್. ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಉಜ್ಜಲ್ ಭುಯಾನ್. ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಶಿಕ್ಷೆ ವಿಧಿಸಿ 2010ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಂಶಗಳನ್ನು ತಿಳಿಸಿದೆ.

ಘಟನೆ 2000ರಲ್ಲಿ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ತನ್ನನ್ನು ಮದುವೆಯಾಗುವಂತೆ ಮನೆಯೊಡತಿಯನ್ನು ಚುಡಾಯಿಸಿದ್ದ. ಆಕೆ ನಿರಾಕರಿಸಿದಾಗ ಆತ ಮಹಿಳೆಯ ಕುಟುಂಬವನ್ನು ನಾಶಪಡಿಸುವುದಾಗಿ ಜೊತೆಗೆ ಆಕೆಯ ಸಹೋದರಿಯ ಘನತೆಗೆ ಕುಂದು ತರುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಲಾಗಿತ್ತು. ವಿಷ ಸೇವಿಸಿ ಸಾಯುವ ಮುನ್ನ ತನ್ನ ಸಹೋದರಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಈ ವಿಚಾರಗಳನ್ನು ತಿಳಿಸಿದ್ದಳು ಎಂದು ಆರೋಪಿಸಲಾಗಿತ್ತು. ವಿಚಾರಣಾ ನ್ಯಾಯಾಲಯ 2004ರಲ್ಲಿ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು.

ಶಿಕ್ಷೆಯ ವಿರುದ್ಧದ ಮೇಲ್ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ನೆರೆಹೊರೆಯವರನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ಅಲ್ಲದೆ ಸಾಕ್ಷಿಗಳು ಪ್ರತಿಕೂಲವಾಗಿ ಪರಿಣಮಿಸಿದ್ದಾರೆ ಎಂಬುದನ್ನು ಗಮನಿಸಿದೆ.

ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ವಿಷವನ್ನು ವಶಪಡಿಸಿಕೊಂಡಿಲ್ಲ. ಆರೋಪಿಯನ್ನು ಶಿಕ್ಷಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

"ಯುವತಿಯ ಸಾವು ಖಂಡಿತವಾಗಿಯೂ ತುಂಬಾ ದುಃಖಕರವಾಗಿದ್ದರೂ, ಆತ್ಮಹತ್ಯೆ ಸಾಬೀತಾಗಿದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ; ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಅಪರಾಧವನ್ನು ರೂಪಿಸುವ ಇತರ ಅಗತ್ಯ ಅಂಶವಾದ ಪ್ರಚೋದನೆ ಕೂಡ ಸಾಬೀತಾಗಿದೆ ಎಂದು ಹೇಳಲಾಗದು" ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಆದ್ದರಿಂದ, ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು.

ಆರೋಪಿ ಪರವಾಗಿ ವಕೀಲ ರಾಜೇಶ್ ಮಹಾಲೆ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮುಹಮ್ಮದ್ ಅಲಿ ಖಾನ್ , ವಕೀಲರಾದ ಒಮರ್ ಹದಾ, ಈಶಾ ಬಕ್ಷಿ, ಉದಯ್ ಭಾಟಿಯಾ, ಕಮ್ರಾನ್ ಖಾನ್, ಅರ್ಜುನ್ ಶರ್ಮಾ, ಡಿ.ಎಲ್.ಚಿದಾನಂದ ಮತ್ತು ರವೀಂದ್ರ ಕುಮಾರ್ ವರ್ಮಾ ವಾದಿಸಿದ್ದರು.

ಗಮನಿಸಿ:

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಅಥವಾ ಸ್ವಯಂ-ಹಾನಿ ಮಾಡಿಕೊಳ್ಳುವಂತಹ ಆಲೋಚನೆಗಳನ್ನು ಹೊಂದಿದ್ದರೆ, ದಯವಿಟ್ಟು ಕೆಳಗೆ ನೀಡಲಾದ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ:

ಐಕಾಲ್ - 9152987821 (ಆರೋಗ್ಯ ಸಹಾಯವಾಣಿ - ಸೋಮವಾರ-ಶನಿವಾರ, ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆ)

ಭಾವನಾತ್ಮಕ ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆತ್ಮಹತ್ಯೆಯ ಆಲೋಚನೆ ಹೊಂದಿರುವವರಿಗೆ ಮತ್ತು ಪ್ರೀತಿಪಾತ್ರರ ಆತ್ಮಹತ್ಯೆಯ ನಂತರ ಆಘಾತಕ್ಕೆ ಒಳಗಾಗುವವರಿಗೆ ʼಆಸರಾʼ ಸಂಸ್ಥೆ ಕೂಡ ನೆರವು ನೀಡುತ್ತದೆ. 24x7 ಸಹಾಯವಾಣಿ: 9820466726

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Shiva Kumar vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com