ನ್ಯಾಯದಾನ ಸಂಸ್ಥೆಯಾಗಿ ತನ್ನ ಉದ್ದೇಶ ಸಮಾಜಕ್ಕೆ ಉಪದೇಶ ನೀಡುವುದಲ್ಲ. ಬದಲಿಗೆ ಕಾನೂನಿಗೆ ಅನುಗುಣವಾಗಿ ನಿರ್ಣಯ ಮಾಡುವುದಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಪುನರುಚ್ಚರಿಸಿದೆ (ನಾಗರತಿನಮ್ ವರ್ಸಸ್ ತಮಿಳುನಾಡು ಸರ್ಕಾರ).
ಪ್ರಿಯತಮನೊಂದಿಗಿನ ಕಲಹದ ಬಳಿಕ ಅವಳಿ ಪುತ್ರರಿಗೆ ವಿಷ ಉಣಿಸಿ ಕೊಲೆಗೈದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ 20 ವರ್ಷಗಳಿಂದ ಜೈಲಿನಲ್ಲಿರುವ ಮಹಿಳೆಯನ್ನು ಅವಧಿಪೂರ್ಣವಾಗಿ ಬಿಡುಗಡೆ ಮಾಡಿದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಹ್ಸಾದುದ್ದೀನ್ ಅಮಾನುಲ್ಲಾ ಅವರ ನೇತೃತ್ವದ ವಿಭಾಗೀಯ ಪೀಠವು ಈ ಕುರಿತ ಆದೇಶದ ವೇಳೆ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಘೋರ ಅಪರಾಧ ಎಸಗಿದ ಬಳಿಕ ಪಶ್ಚಾತಾಪ ಇಲ್ಲದೇ ತನ್ನ ಅಕ್ರಮ ಸಂಬಂಧ ಮುಂದುವರಿಸುವ ಇರಾದೆಯನ್ನು ಆಕೆ ಹೊಂದಿದ್ದಾಳೆ ಎಂದು ತಮಿಳುನಾಡು ಸರ್ಕಾರವು ಆಕೆಗೆ ಕ್ಷಮಾದಾನ ನೀಡಲು ನಿರಾಕರಿಸಿತ್ತು.
ಪ್ರಿಯತಮನ ಜೊತೆಗಿನ ಕಲಹದ ಬಳಿಕ ಮಹಿಳೆ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದರು ಎಂದು ನ್ಯಾಯಾಲಯ ಹೇಳಿದೆ. “ನೈತಿಕತೆ ಮತ್ತು ಮೌಲ್ಯಗಳ ವಿಚಾರದಲ್ಲಿ ಸಮಾಜಕ್ಕೆ ಉಪದೇಶ ನೀಡುವ ಸಂಸ್ಥೆ ನ್ಯಾಯಾಲಯವಲ್ಲ. ಈ ವಿಚಾರದಲ್ಲಿ ನಾವು ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ. ನ್ಯಾಯಾಲಯವು ಕಾನೂನು ಕಟ್ಟಳೆಗೆ ಒಳಪಟ್ಟಿರುತ್ತದೆ. ಆಕೆಯ ಕೃತ್ಯವನ್ನು 'ಘೋರ ಮತ್ತು ಪೈಶಾಚಿಕ' ಎಂಬುದಕ್ಕೆ ಸೀಮಿತಗೊಳಿಸಿ ನೋಡಲಾಗದು. ಆಕೆಯೂ ಸಾಯಲು ಮುಂದಾಗಿದ್ದರು, ಆದರೆ ಸೂಕ್ತ ಸಂದರ್ಭದಲ್ಲಿ ಆಕೆಯ ಸಂಬಂಧಿ ಅವರನ್ನು ಉಳಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ, ಕೊಲೆ ಪ್ರಕರಣದಲ್ಲಿ ಮಹಿಳೆಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದು, ಆತ್ಮಹತ್ಯೆ ಆರೋಪ ಕೈಬಿಟ್ಟಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸಹ ನ್ಯಾಯಾಲಯವು ಎತ್ತಿ ಹಿಡಿದಿದೆ.
“ನಾವು ಅಪರಾಧವನ್ನು ಮರೆತಿಲ್ಲ, ಅದೇ ರೀತಿ, ಮೇಲ್ಮನವಿದಾರೆಯು ಈಗಾಗಲೇ ದುರ್ವಿಧಿಯ ಹೊಡೆತಕ್ಕೆ ಸಿಲುಕಿ ಸಾಕಷ್ಟು ನಲುಗಿರುವುದನ್ನೂ ಮರೆತಿಲ್ಲ. ಹಾಗಾಗಿ, ಈ ವ್ಯಾಪ್ತಿಗೆ ಪ್ರವೇಶಿಸುವುದನ್ನು ನ್ಯಾಯಾಲಯವು ಸಕಾರಣವಾಗಿ ತಪ್ಪಿಸಲು ಬಯಸುತ್ತದೆ" ಎಂದು ಪೀಠವು ಸ್ಪಷ್ಟಪಡಿಸಿತು. ಅಪರಾಧಿ ಮಹಿಳೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ಮಾಡಿತು.