ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡಲು ಆಧುನಿಕ ಇಲ್ಲವೇ ಅಲೋಪತಿ ಔಷಧ ಸೂಕ್ತವಲ್ಲ ಎಂದಿದ್ದ ತಮ್ಮ ಹೇಳಿಕೆ ಪ್ರಶ್ನಿಸಿ ಹೂಡಲಾಗಿದ್ದ ಹಲವು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಯೋಗ ಗುರು ಮತ್ತು ಪತಂಜಲಿ ಉತ್ಪನ್ನಗಳ ಪ್ರವರ್ತಕ ಬಾಬಾ ರಾಮದೇವ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಬಿಹಾರ ಹಾಗೂ ಛತ್ತೀಸ್‌ಗಢ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ರಾಮ್‌ದೇವ್ ಪರ ವಕೀಲ, ಹಿರಿಯ ವಕೀಲ ಸಿದ್ಧಾರ್ಥ ದವೆ ಅವರು ಮಂಡಿಸಿದ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.
ಕೋವಿಡ್ ಚಿಕಿತ್ಸೆಗಾಗಿ ವೈದ್ಯರು ಅನುಸರಿಸುತ್ತಿದ್ದ ವಿಧಿವಿಧಾನವನ್ನು ಟೀಕಿಸಿ ತಾನು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ್ಲಲಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆಸದಂತೆ ತಡೆ ನೀಡಬೇಕೆಂದು ಕೋರಿ ರಾಮದೇವ್ 2021ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಐಎಂಎ ತನ್ನ ಪಾಟ್ನಾ ಮತ್ತು ರಾಯ್‌ಪುರ ಶಾಖೆಗಳ ಮೂಲಕ ದಾಖಲಿಸಿದ್ದ ಎಫ್‌ಐಆರ್ ಪ್ರಕ್ರಿಯೆಗಳಿಗೆ ತಡೆ ನೀಡುವಂತೆ ರಾಮ್‌ದೇವ್ ಕೋರಿದರು. ಜೊತೆಗೆ ಎಫ್‌ಐಆರ್‌ಗಳನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆಯೂ ಮನವಿ ಮಾಡಿದ್ದರು.
ರಾಮ್‌ದೇವ್ ವಿರುದ್ಧ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವೆಯಲ್ಲಿರುವವರು ನೀಡಿದ ಆದೇಶಕ್ಕೆ ಅವಿಧೇಯತೆ), 269 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ), 504 (ಶಾಂತಿಗೆ ಭಂಗ ತರುವ ಸಲುವಾಗಿ ಮಾಡಿದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.