ವಿವಾಹಿತ ದಂಪತಿಗಳ ವೈಯಕ್ತಿಕ ದಾಖಲೆಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ 1954ರ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ವಿವಾಹಿತ ದಂಪತಿಗಳ ವೈಯಕ್ತಿಕ ದಾಖಲೆಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ 1954ರ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕೇರಳದ ಮೂರನೇ ವರ್ಷದ ಕಾನೂನು ವಿದ್ಯಾರ್ಥಿನಿ ನಂದಿನಿ ಪ್ರವೀಣ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಈ ನೋಟಿಸ್ ನೀಡಿದೆ.
ಅರ್ಜಿಯಲ್ಲಿ 1954ರ ಕಾಯ್ದೆಯ 5, 6 (2), 7, 8, 9 ಮತ್ತು 10 ನೇ ಸೆಕ್ಷನ್ ಗಳು ಭಾರತದ ಸಂವಿಧಾನದ 14, 15 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸಿವೆ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಈ ಸೆಕ್ಷನ್ ಗಳ ಪ್ರಕಾರ ಮದುವೆಗೂ ಮೂವತ್ತು ದಿನ ಮೊದಲು ಎರಡೂ ಕಡೆಯವರ ವೈಯಕ್ತಿಕ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಪ್ರಕಟಿಸಬೇಕಾಗುತ್ತದೆ. ಮದುವೆ ಕುರಿತು ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಅಂತಹ ಆಕ್ಷೇಪಣೆಗಳ ವಿಚಾರಣೆಗೆ ವಿವಾಹಾಧಿಕಾರಿಗೆ ಅಧಿಕಾರ ನೀಡಲಾಗುತ್ತದೆ.
ಈ ನಿಬಂಧನೆಗಳು ಮದುವೆಯಾಗಲು ಬಯಸಿರುವ ದಂಪತಿಯ ಮೂಲಭೂತ ಹಕ್ಕಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ 21ನೇ ಪರಿಚ್ಛೇದದಡಿಯಲ್ಲಿ ದೊರೆಯುವ ಗೋಪ್ಯತೆ ಕಾಪಾಡಿಕೊಳ್ಳುವ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರು ಹೇಳುವ ಪ್ರಮುಖ ಅಂಶಗಳೇನು?
1955ರ ಹಿಂದೂ ವಿವಾಹ ಕಾಯ್ದೆ ಮತ್ತು ಇಸ್ಲಾಂ ಧರ್ಮದಲ್ಲಿನ ಕಾನೂನುಗಳ ಪ್ರಕಾರ ಮದುವೆಗೆ ಮೊದಲು ನೋಟಿಸ್ ನೀಡುವ ಅಗತ್ಯವಿಲ್ಲ. ಆದ್ದರಿಂದ, ಈ ನಿಬಂಧನೆಯು ಭಾರತದ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ.
ಆಕ್ಷೇಪಿತ ನಿಬಂಧನೆಗಳಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳು ಸಾರ್ವಜನಿಕ ಪರಾಮರ್ಶೆಗೆ ಒಳಪಡಬೇಕೆಂದು ನಿಬಂಧನೆಗಳಲ್ಲಿ ಇದ್ದು ಇದು ವ್ಯಕ್ತಿಯ ಅವನ/ ಅವಳ ವೈಯಕ್ತಿಕ ಮಾಹಿತಿ ಮೇಲೆ ನಿಯಂತ್ರಣ ಹೊಂದುವ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ.
ಮದುವೆಯು ಇಬ್ಬರು ವಯಸ್ಕರ ಸಮ್ಮತಿಯ ಮೇಲೆ ತೆಗೆದುಕೊಂಡ ಖಾಸಗಿ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ.
ಜಾತ್ಯತೀತ ನೆಲೆಯಲ್ಲಿ ವಿವಾಹಕ್ಕೆ ಅವಕಾಶ ಮಾಡಿಕೊಡಲು ವಿಶೇಷ ವಿವಾಹ ಕಾಯ್ದೆ ರೂಪಿಸಲಾಗಿದ್ದು ದಂಪತಿಯ ವೈಯಕ್ತಿಕ ವಿವರಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೂಲಕ ದಂಪತಿಗಳು ತಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಹಕ್ಕಿಗೆ ಸರ್ಕಾರ ಅಡ್ಡಿಪಡಿಸುತ್ತಿದೆ.
ಒಂದು ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು, ‘ಜೋಡಿಗಳು ಓಡಿ ಹೋಗಿ ಮದುವೆಯಾಗಲು ಬಯಸಿದರೆ ಏನಾಗಬಹುದು?’ ಎಂದು ತಿಳಿಯಲು ಬಯಸಿದರು.
‘ಮದುವೆಯಾಗಲೆಂದು ಮಕ್ಕಳು ಓಡಿಹೋದರೆ? ಮಕ್ಕಳು ಎಲ್ಲಿದ್ದಾರೆ ಎನ್ನುವುದು ಪೋಷಕರಿಗೆ ಹೇಗೆ ಗೊತ್ತಾಗುತ್ತದೆ? ಹೆಂಡತಿ ಓಡಿ ಹೋದರೆ ಗಂಡನಿಗೆ ಹೇಗೆ ತಿಳಿಯುತ್ತದೆ?’
ಮುಖ್ಯ ನ್ಯಾಯಮೂರ್ತಿ ಬೋಬ್ಡೆ
ಆಗ ವಾದ ಮಂಡಿಸಿದ ವಕೀಲ ಕಲೀಶ್ವರಂ ರಾಜ್ ಅವರು ‘ವಿವಾಹಾಧಿಕಾರಿ ದಂಪತಿಗಳ ವಿವರಗಳನ್ನು ವಿಚಾರಣೆ ನಡೆಸಲು ಆಸ್ಪದವಾಗಬಾರದು ಎಂದು ಅರ್ಜಿದಾರರು ಹೇಳುತ್ತಿಲ್ಲ, ಆದರೆ ಈ ವಿಚಾರ ಸಾರ್ವಜನಿಕ ವಲಯದಲ್ಲಿ ದಾಖಲೆಯಾಗಿ ಪ್ರಕಟಣೆಯಾಗುವುದರ ಬಗ್ಗೆ ಆಕ್ಷೇಪ ಇದೆ ಎಂದು ಪ್ರತಿಕ್ರಿಯಿಸಿದರು.
ನ್ಯಾಯಾಲಯ ಅಂತಿಮವಾಗಿ ಪ್ರಕರಣದ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.