Supreme Court, halal
Supreme Court, halal

ಹಲಾಲ್ ಉತ್ಪನ್ನಗಳ ನಿಷೇಧ: ಆಕ್ಷೇಪಣೆ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮೀಯತ್ ಉಲಾಮಾ-ಇ-ಮಹಾರಾಷ್ಟ್ರ, ಜಮೀಯತ್ ಉಲಾಮಾ ಹಲಾಲ್ ಫೌಂಡೇಶನ್ ಸರ್ಟಿಫಿಕೇಷನ್ ಪ್ರೈವೇಟ್ ಲಿಮಿಟೆಡ್ ಪ್ರಶ್ನಿಸಿವೆ.

ರಾಜ್ಯದಲ್ಲಿ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ಆರಂಭದಲ್ಲಿ ಅರ್ಜಿದಾರರಿಗೆ ಮೊದಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿತು.

"ಸಂವಿಧಾನದ 32 ನೇ ವಿಧಿ ಅಡಿಯಲ್ಲಿ ನಾವು ಏಕೆ ಅರ್ಜಿ ಪರಿಗಣಿಸಬೇಕು? ದೇಶಾದ್ಯಂತ ಪರಿಣಾಮಗಳು ಉಂಟಾಗಲಿದೆ ಎಂದು ವಾದಿಸಲಾಗಿದೆ. ಆದರೆ ಹೈಕೋರ್ಟ್ ಸಹ ಅದನ್ನು ಪರಿಶೀಲಿಸಬಹುದು" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಪ್ರತಿಕ್ರಿಯಿಸಿದ್ದು, ಅಂತಹ ಉತ್ಪನ್ನಗಳನ್ನು ನಿಷೇಧಿಸುವ ನಿರ್ಧಾರವು ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ. ಇದು ಧಾರ್ಮಿಕ ಆಚರಣೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದರು.

"ಇದು ನನ್ನನ್ನು ಕ್ರಿಮಿನಲ್ ಹೊಣೆಗಾರಿಕೆಗೆ ಒಡ್ಡುತ್ತದೆ ಮತ್ತು ಅಂತಹ ಬೇಡಿಕೆಗಳನ್ನು ಈಗಾಗಲೇ ಕರ್ನಾಟಕ ಮತ್ತು ಬಿಹಾರದಲ್ಲಿ ಮಾಡಲಾಗುತ್ತಿದೆ. ಈ ರೀತಿಯ ಆದೇಶವನ್ನು ಹೊರಡಿಸಬಹುದೇ ಎಂದು ನೋಡಬೇಕಾಗಿದೆ. ಈ ಆದೇಶವು ಎಫ್ಎಸ್ಎಸ್ಎ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ) ವ್ಯಾಪ್ತಿಯಲ್ಲಿಯೂ ಇಲ್ಲ" ಎಂದು ವಕೀಲರು ಹೇಳಿದರು.

ಈ ನಿರ್ಧಾರದಿಂದ ಅಂತಾರಾಜ್ಯ ವ್ಯಾಪಾರ ಮತ್ತು ವಾಣಿಜ್ಯದ ಮೇಲೂ ಪರಿಣಾಮ ಬೀರುತ್ತದೆ ಮತ್ತು ಕೇಂದ್ರ ಸರ್ಕಾರವು ಈ ಪ್ರಕರಣದಲ್ಲಿ ಒಂದು ಖಚಿತ ನಿಲುವನ್ನು ತೆಗೆದುಕೊಳ್ಳಬೇಕು ಎಂದು ವಕೀಲರು ವಾದಿಸಿದರು.

"ಸಾರ್ವಜನಿಕ ಆರೋಗ್ಯದ ವಿಷಯವು ಇಲ್ಲಿ ಪ್ರಶ್ನಾರ್ಹವಾಗಿದೆ. ಇದು ತಕ್ಷಣಕ್ಕೇ ವ್ಯಾಪಾರ, ವಾಣಿಜ್ಯ, ಗ್ರಾಹಕರು ಮತ್ತು ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ, ಇದು ದೇಶದಾದ್ಯಂತ ಸಮಸ್ಯೆಗೆ ಕಾರಣವಾಗಲಿದೆ. ಇದಕ್ಕಾಗಿಯೇ ನಾವು ಇಲ್ಲಿದ್ದೇವೆ " ಎಂದು ವಕೀಲರು ಹೇಳಿದರು.

ವಾದ ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮೀಯತ್ ಉಲಾಮಾ-ಇ-ಮಹಾರಾಷ್ಟ್ರ ಮತ್ತು ಜಮೀಯತ್ ಉಲಾಮಾ ಹಲಾಲ್ ಫೌಂಡೇಶನ್ (ಜೆಯುಎಚ್ಎಫ್) ಸರ್ಟಿಫಿಕೇಶನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಧಾರ್ಮಿಕ ಮತ್ತು ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ಸಂವಿಧಾನದ 26 ಮತ್ತು 29ನೇ ವಿಧಿಯ ಅಡಿಯಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ಮತ್ತು ವೈಯಕ್ತಿಕ ಕಾನೂನುಗಳ ಭಾಗವಾಗಿರುವ ಹಲಾಲ್ ಉತ್ಪನ್ನಗಳನ್ನು ಗುರುತಿಸಲು ಹಾಗೂ ಸೇವಿಸಲು ರಕ್ಷಣೆ ಇದೆ. ನಿಷೇಧವು ಅಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com