ಕೋವಿಡ್ ಲಸಿಕೆ ಪ್ರಯೋಗದ ದತ್ತಾಂಶ ಬಹಿರಂಗಪಡಿಸಲು ಕೋರಿಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ ಎಂದು ಸರ್ಕಾರ ಸಮರ್ಥಿಸಿಕೊಂಡರೂ, ಲಸಿಕೆ ಹಾಕಿಸಿಕೊಳ್ಳದವರಿಗೆ ಅಗತ್ಯ ಸೇವೆಗಳನ್ನು ಅದು ನಿರಾಕರಿಸುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಕೋವಿಡ್ ಲಸಿಕೆ ಪ್ರಯೋಗದ ದತ್ತಾಂಶ ಬಹಿರಂಗಪಡಿಸಲು ಕೋರಿಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
Supreme Court and Covid vaccine

ಅಗತ್ಯ ಸೇವೆ ಪಡೆಯಲು ಕೋವಿಡ್‌ ಲಸಿಕೆ ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ರೋಗ ನಿರೋಧಕತೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ ಮಾಜಿ ಸದಸ್ಯ ಡಾ. ಜೇಕಬ್ ಪುಲಿಯೆಲ್ ಅವರು ಸಲ್ಲಿಸಿರುವ ಮನವಿಯಲ್ಲಿ ವೈದ್ಯಕೀಯ ತಪಾಸಣೆ ಮತ್ತು ಲಸಿಕೆ ನೀಡಿದ ನಂತರ ಮಾಹಿತಿಯನ್ನು ಒದಗಿಸುವಂತೆ ಕೋರಲಾಗಿದೆ. ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ ಆರೋಗ್ಯ ಸಚಿವಾಲಯದಿಂದ ಪ್ರತಿಕ್ರಿಯೆ ಕೇಳಿತು. ಆದರೆ ಯಾವುದೇ ಮಧ್ಯಂತರ ನಿರ್ದೇಶನ ನೀಡಲು ನಿರಾಕರಿಸಿತು. ಮನವಿ ಸ್ವೀಕರಿಸಿದ ಮಾತ್ರಕ್ಕೆ ಕೋವಿಡ್‌ ಲಸಿಕೆಗಳ ಪರಿಣಾಮಕಾರಿತ್ವವನ್ನು ನಾವು ನಂಬುವುದಿಲ್ಲ ಎಂಬ ಸಂಕೇತ ಹೊಮ್ಮಬಾರದು ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಅಗತ್ಯ ಸೇವೆಗಳನ್ನು ಪಡೆಯಲು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಒತ್ತಾಯಪೂರ್ವಕವಾಗಿ ಜನತೆಗೆ ಲಸಿಕೆ ತೆಗೆದುಕೊಳ್ಳುವಂತೆ ಒತ್ತಡ ಹೇರುವುದು ನಾಗರಿಕರ ಹಕ್ಕುಗಳ ಉಲ್ಲಂಘನೆ ಮತ್ತು ಅಸಾಂವಿಧಾನಿಕ.

  • ಅಗತ್ಯ ಸೇವೆ ಅಥವಾ ಉದ್ಯೋಗ ಪಡೆಯಲು ಲಸಿಕೆ ಹಾಕುವುದನ್ನು ಕಡ್ಡಾಯಗೊಳಿಸುವುದು ದೇಶದ ಅನೇಕ ಕಡೆ ನಡೆಯಲಾರಂಭಿಸಿದೆ. ವಿಶೇಷವಾಗಿ ಸಂಪೂರ್ಣ ಮತ್ತು ಸಮರ್ಪಕ ಪರೀಕ್ಷೆಯಿಲ್ಲದೆ ತುರ್ತು ಅನುಮೋದನೆಗಳನ್ನು ನೀಡಿರುವ ಪರಿಸ್ಥಿತಿಯಲ್ಲಿ ಮತ್ತು ಲಸಿಕೆಯೋತ್ತರ ದತ್ತಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ಪಾರದರ್ಶಕತೆ ಇಲ್ಲದೆ ಲಸಿಕೆ ನೀಡುವುದು ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ.

  • ಸ್ವಪ್ರೇರಣೆಯಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸರ್ಕಾರವು ಅನೇಕ ಆರ್‌ಟಿಐಗಳಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ದೇಶದಾದ್ಯಂತ ವಿವಿಧ ಪ್ರಾಧಿಕಾರಗಳು ಈಗ ಲಸಿಕೆ ಕಡ್ಡಾಯಗೊಳಿಸುತ್ತಿದ್ದಾರೆ.

  • ಕೆ ಎಸ್‌ ಪುಟ್ಟಸ್ವಾಮಿ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಅರ್ಜಿ ಅವಲಂಬಿಸಿದೆ. ಇದರಲ್ಲಿ ವ್ಯಕ್ತಿಯ ಸ್ವಾಯತ್ತತೆಯ ಹಕ್ಕು ಎಂಬುದು ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯು ಸ್ವಯಂ ನಿರ್ಧರಣದ ಹಕ್ಕಾಗಿದೆ. ಇದು ಸಂವಿಧಾನದ 21ನೇ ವಿಧಿಯಿಂದ ಬಲ ಪಡೆಯುತ್ತದೆ ಹಾಗೂ ವ್ಯಕ್ತಿಯ ಖಾಸಗಿತನದ ಹಕ್ಕಿನ ಭಾಗವಾಗಿದೆ.

  • ಸುರಕ್ಷತೆಯ ದೃಷ್ಟಿಯಿಂದ ಸಮರ್ಪಕವಾಗಿ ಪರೀಕ್ಷಿಸದೆಅಥವಾ ದತ್ತಾಂಶವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದೆ ಈಗ ತುರ್ತು ಬಳಕೆಯ ಅಧಿಕಾರದ ಅಡಿಯಲ್ಲಿ ಪ್ರಸ್ತುತ ಬಳಸುತ್ತಿರುವ ಲಸಿಕೆಗಳಿಗೆ ಪರವಾನಗಿ ನೀಡಲಾಗಿದೆ.

  • ವೈದ್ಯಕೀಯ ಪರೀಕ್ಷಾ ಪ್ರಯೋಗಗಳು ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ರೂಪಿಸಿರುವ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಸರಿಸುತ್ತಿರುವ ವೈಜ್ಞಾನಿಕ ಬಹಿರಂಗಪಡಿಸುವಿಕೆ ಮತ್ತು ಮಾರ್ಗಸೂಚಿಯ ನಿಯಮಗಳ ಸ್ಪಷ್ಟ ಉಲ್ಲಂಘನೆಯು ಲಸಿಕೆಯ ಪರವಾನಗಿ ವಿಷಯದಲ್ಲಿ ನಡೆದಿದೆ. ಭಾರತದಲ್ಲಿ ಲಸಿಕೆಗಳಿಗೆ ಪರವಾನಗಿ ಪಡೆದ ವಿಧಾನವು ಭವಿಷ್ಯದಲ್ಲಿ ಲಸಿಕೆಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವ ಸಾಧ್ಯತೆಯನ್ನು ತಡೆಯುತ್ತದೆ.

  • ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ ಎಂದು ಸರ್ಕಾರ ಸಮರ್ಥಿಸಿಕೊಂಡರೂ, ಲಸಿಕೆ ಹಾಕಿಸಿಕೊಳ್ಳದವರಿಗೆ ಅಗತ್ಯ ಸೇವೆಗಳನ್ನು ಅದು ನಿರಾಕರಿಸುತ್ತಿದೆ.

ವಕೀಲ ಪ್ರಶಾಂತ್ ಭೂಷಣ್‌ ಈ ಸಂಬಂಧ ಎರಡು ಹಂತದ ವಾದ ಮಂಡಿಸಿದರು. ಜನರು ಮಾಹಿತಿಯುಕ್ತ ಆಯ್ಕೆ ಮಾಡಲು ಅನುವಾಗುವಂತೆ ಪ್ರಾಯೋಗಿಕವಾಗಿ ದತ್ತಾಂಶ ಪ್ರಕಟಿಸಲು ಅವರು ಕೋರಿದರು. ದತ್ತಾಂಶವನ್ನು ಸಾರ್ವಜನಿಕಗೊಳಿಸದಿದ್ದರೆ ಜನರಲ್ಲಿ ವಿಶ್ವಾಸ ಮೂಡುವುದಿಲ್ಲ ಮತ್ತು ಲಸಿಕೆ ಪಡೆಯಲು ಹಿಂಜರಿಯುವುದಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಆಗ ನ್ಯಾಯಾಲಯ "ನಿಮ್ಮ ಕಾಳಜಿಯನ್ನು ನಾವು ಪ್ರಶಂಸಿಸುತ್ತೇವೆ. ನಾವು ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡಿದ್ದು ವಿರುದ್ಧ ನೆಲೆಯಲ್ಲಿ ನೋಡುತ್ತಿದ್ದೇವೆ. ಲಸಿಕೆಗಳನ್ನು ನಿಲ್ಲಿಸಲು ನಮಗೆ ಯಾವುದೇ ಮಾರ್ಗವಿಲ್ಲ" ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು. ಈ ಹಂತದಲ್ಲಿ ಭೂಷಣ್‌ ಮನವಿ ವ್ಯಾಕ್ಸಿನ್‌ ವಿರೋಧಿಯಲ್ಲ. ಬದಲಿಗೆ ಲಸಿಕೆಯ ಪ್ರತಿಕೂಲ ಪರಿಣಾಮಗಳನ್ನು ತಾವು ಎತ್ತಿ ತೋರಿಸುತ್ತಿರುವುದಾಗಿ ಅವರು ಹೇಳಿದರು. ಐಸಿಎಂಆರ್‌ ವರದಿಯನ್ವಯ ದೇಶದ ಮೂರನೇ ಎರಡು ಭಾಗದಷ್ಟು ಜನತೆಗೆ ಕೋವಿಡ್‌ ಬಂದು ಹೋಗಿದೆ. ಹೊಸ ಅಧ್ಯಯನವೊಂದು ಲಸಿಕೆಯು ಹೊಸ ರೂಪಾಂತರಿ ವೈರಸ್‌ಗಳಿಗೆ ಕಾರಣವಾಗುತ್ತಿರುವುದಾಗಿ ಹೇಳಿದೆ. ಅಲ್ಲದೆ ಡೆಲ್ಟಾ ರೂಪಾಂತರಿಯ ಮೇಲೆ ಲಸಿಕೆ ಪರಿಣಾಮ ಬೀರುತ್ತಿಲ್ಲ ಎಂದರು.

"ದೇಶ ಲಸಿಕೆ ಕೊರತೆಯ ವಿರುದ್ಧ ಸೆಣಸುತ್ತಿದೆ. ಈಗ ನಾವು ಬೇರೆ ನೆಲೆಯಲ್ಲಿದ್ದೇವೆ. ಲಸಿಕೆ ಮುಂದುವರಿಯಲಿ. ನಾವು ಇದನ್ನು ನಿಲ್ಲಿಸಲು ಬಯಸುವುದಿಲ್ಲ" ಎಂದು ಹೇಳಿದ ಪೀಠ ಕೇಂದ್ರಕ್ಕೆ ನೋಟಿಸ್‌ ನೀಡಿತು. ಬಲವಂತದ ಆದೇಶಗಳು ಸಮಸ್ಯೆಗಳಾಗಿರುವುದರಿಂದ ಪ್ರಕರಣವನ್ನು ಶೀಘ್ರವಾಗಿ ನಿರ್ಧರಿಸುವಂತೆ ಪ್ರಶಾಂತ್‌ ಭೂಷಣ್‌ ಕೋರಿದರು.

Related Stories

No stories found.