ಐಸಿಜೆ ವಿಚಾರಣೆ ಮೂಲಕ ಪಾಕಿಸ್ತಾನ ಬಂಧಿಸಿರುವ ಯೋಧನ ಬಿಡುಗಡೆಗೆ ಪತ್ನಿ ಕೋರಿಕೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಮನವಿ ಪ್ರಮುಖ ವಿಚಾರವನ್ನೊಳಗೊಂಡಿದೆ ಎಂದ ಪೀಠ ಕೇಂದ್ರ ಸರ್ಕಾರದಿಂದ ಈ ಸಂಬಂಧ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿತು.
Justice DY Chandrachud and Justice Surya Kant
Justice DY Chandrachud and Justice Surya Kant
Published on

ಯುದ್ಧಕೈದಿಗಳ ಬದುಕುವ ಹಕ್ಕಿನ ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ವಿಧಾನವೊಂದನ್ನು ಜಾರಿಗೆ ತರಬೇಕೆಂದು ಕೋರಿ 1971 ರಿಂದ ಪಾಕಿಸ್ತಾನ ವಶದಲ್ಲಿರುವ ಯುದ್ಧ ಕೈದಿ ಮೇಜರ್‌ ಕಂವಲ್ಜಿತ್‌ ಸಿಂಗ್‌ ಅವರ ಪತ್ನಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ [ಶ್ರೀಮತಿ ಜಸ್ಬೀರ್‌ ಕೌರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಜೊತೆಗೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಎಲ್ಲಾ ಭಾರತೀಯ ಯುದ್ಧ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ದಾವೆ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕೆಂದು ಮನವಿ ಕೋರಿದೆ.

Also Read
ಅಂತರರಾಷ್ಟ್ರೀಯ ನ್ಯಾಯಾಲಯ ಕಾರ್ಯಪ್ರವೃತ್ತವಾಗದಿದ್ದರೆ ಪುಟಿನ್ ಆಕ್ರಮಣಕ್ಕೆ ಇದೇ ಕೊನೆಯ ನಿದರ್ಶನವಾಗದು: ಯುಕ್ರೇನ್

ಮನವಿ ಪ್ರಮುಖ ವಿಚಾರವನ್ನೊಳಗೊಂಡಿದೆ ಎಂದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಕೇಂದ್ರ ಸರ್ಕಾರದಿಂದ ಈ ಸಂಬಂಧ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿತು. ಮೂರು ವಾರದ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಮೇಜರ್ ಕಂವಲ್ಜಿತ್ ಸಿಂಗ್ ಅವರ ಪತ್ನಿ ಜಸ್ಬೀರ್ ಕೌರ್ ಮತ್ತು ವಾಯ್ಸ್ ಆಫ್ ಎಕ್ಸ್ ಸರ್ವಿಸ್‌ಮೆನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಭಾರತೀಯ ಸೇನೆಯ ನಿವೃತ್ತ ಯೋಧ ಬೀರ್ ಬಹದ್ದೂರ್ ಸಿಂಗ್ ಅರ್ಜಿ ಸಲ್ಲಿಸಿದ್ದಾರೆ. ಮನವಿಯಲ್ಲಿ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಸೇನಾ ಮುಖ್ಯಸ್ಥರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. 1971ರ ಭಾರತ-ಪಾಕ್ ಯುದ್ಧದ ನಂತರ ಪಾಕಿಸ್ತಾನ ಬಂಧಿಸಿರುವ 54 ಯುದ್ಧ ಕೈದಿಗಳಲ್ಲಿ ಕೌರ್ ಅವರ ಪತಿಯೂ ಸೇರಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿಯಲ್ಲಿ ಕಾರ್ಗಿಲ್‌ ಯುದ್ಧದ ವೇಳೆ ಪಾಕಿಸ್ತಾನದ ಕೈಗೆ ಸಿಲುಕಿದ ಕ್ಯಾಪ್ಟನ್‌ ಸೌರಭ್‌ ಕಾಲಿಯಾ ಹಾಗೂ ಐವರು ಯೋಧರನ್ನು ಪಾಕಿಸ್ತಾನದ ಸೇನೆಯು ಚಿತ್ರಹಿಂಸೆ ನೀಡಿ ಅವರ ಶವಗಳನ್ನು ಹಿಂದಿರುಗಿಸಿದ ಘಟನೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

Kannada Bar & Bench
kannada.barandbench.com