Supreme Court and Senior Designation Guidelines, 2026
Supreme Court and Senior Designation Guidelines, 2026

ಹಿರಿಯ ನ್ಯಾಯವಾದಿ ಹುದ್ದೆ: ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂ ಕೋರ್ಟ್‌; ಅಂಕ ವ್ಯವಸ್ಥೆ ಸಂದರ್ಶನಕ್ಕೆ ಕೊಕ್‌

ಅಂತೆಯೇ ಹಿರಿಯ ವಕೀಲರ ನೇಮಕಾತಿ ಸಮಿತಿಯ ರಚನೆಯಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಈಗ ಸಮಿತಿಯಲ್ಲಿ ಕೇವಲ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಇರಲಿದ್ದಾರೆ.
Published on

ಹಿರಿಯ ವಕೀಲರ ಹುದ್ದೆ ಮಾನ್ಯತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

2023ರ ಮಾರ್ಗಸೂಚಿಗಳಿಗೆ ಬದಲಾಗಿ ಅಸ್ತಿತ್ವಕ್ಕೆ ಬಂದಿರುವ 'ಭಾರತದ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರ ಹುದ್ದೆಗೆ ಮಾರ್ಗಸೂಚಿಗಳು, 2026' ಹೆಸರಿನ ಈ ಮಾರ್ಗಸೂಚಿಗಳು ಜಿತೇಂದರ್‌ ಅಲಿಯಾಸ್‌ ಕಲ್ಲಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪಿನನ್ವಯ ಜಾರಿಗೆ ಬಂದಿವೆ.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

ಫೆಬ್ರವರಿ 10ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ಎಲ್ಲಾ ನ್ಯಾಯಮೂರ್ತಿಗಳ ಸಹಭಾಗಿತ್ವದಲ್ಲಿ ಈ ಮಾರ್ಗಸೂಚಿಗಳಿಗೆ ಅನುಮೋದನೆ ದೊರೆತಿತ್ತು.  

2017ರ ಇಂದಿರಾ ಜೈಸಿಂಗ್‌ ಮತ್ತು ಸುಪ್ರೀಂ ಕೋರ್ಟ್‌ ನಡುವಣ ಪ್ರಕರಣದ ತೀರ್ಪಿನ ಅನ್ವಯ ಇದ್ದ ಅಂಕವ್ಯವಸ್ಥೆ ಮತ್ತು ವಕೀಲರ ಸಂದರ್ಶನವನ್ನು ಪೂರ್ಣವಾಗಿ ರದ್ದು ಮಾಡಲಾಗಿದೆ.

ಹಳೆಯ ವ್ಯವಸ್ಥೆಯಲ್ಲಿ ಅನುಭವ, ಪ್ರಕಟಿತ ತೀರ್ಪುಗಳು, ಬರವಣಿಗೆ, ವ್ಯಕ್ತಿತ್ವ ಇಲ್ಲವೇ ಸೂಕ್ತತೆ ಮುಂತಾದ ಅಂಶಗಳಿಗೆ ಅಂಕಗಳನ್ನು ನೀಡಲಾಗುತ್ತಿತ್ತು ಮತ್ತು ಶಾಶ್ವತ ಸಮಿತಿಯಲ್ಲಿ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಅಟಾರ್ನಿ ಜನರಲ್ ಅಥವಾ ರಾಜ್ಯಗಳಿಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಮತ್ತು ವಕೀಲ ವರ್ಗದ ಪ್ರತಿನಿಧಿ ಭಾಗಿಯಾಗುತ್ತಿದ್ದರು. ಆದರೆ ಇದೀಗ ಅದರಲ್ಲಿರುವ ಅಂಕಗಳ ನಿರ್ಧಾರ ಮಾದರಿ ಹಾಗೂ ಸಂದರ್ಶನ ಹಂತವನ್ನು ಒಟ್ಟಾರೆಯಾಗಿ ತೆಗೆಯಲಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಹಿರಿಯ ವಕೀಲರ ನೇಮಕಾತಿ ಸಂಬಂಧಿ ಎಲ್ಲಾ ವಿಷಯಗಳನ್ನು “ಹಿರಿಯ ವಕೀಲರ ಪದೋನ್ನತಿ ಸಮಿತಿ” ಎಂಬ ಶಾಶ್ವತ ಸಮಿತಿ ನೋಡಿಕೊಳ್ಳಲಿದೆ. ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇಬ್ಬರು ಅತಿ ಹಿರಿಯ ನ್ಯಾಯಮೂರ್ತಿಗಳು ಮಾತ್ರ ಇರಲಿದ್ದಾರೆ.

ಹಿರಿಯ ನ್ಯಾಯವಾದಿಗಳ ಹುದ್ದೆ ಪ್ರಕ್ರಿಯೆಯನ್ನು ಕನಿಷ್ಠ ವರ್ಷಕ್ಕೆ ಒಮ್ಮೆ ನಡೆಸಲಿದ್ದು ಅರ್ಜಿ ಸ್ವೀಕರಿಸಲು ಕನಿಷ್ಠ 21 ದಿನಗಳ ಕಾಲಾವಕಾಶ ಇರುತ್ತದೆ.

ಅರ್ಹತೆ

  • ಕನಿಷ್ಠ 10 ವರ್ಷ ಸೇವಾ ಅನುಭವ ಇರಬೇಕು (ವಕೀಲ ಅಥವಾ ವಕೀಲ + ನ್ಯಾಯಧೀಶ ನ್ಯಾಯಿಕ ಸಮುದಾಯದ ಸದಸ್ಯ). 

  • ಹೆಚ್ಚಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ಮಾಡಬೇಕಾಗಿರುತ್ತದೆ (ವಿಶೇಷ ನ್ಯಾಯಮಂಡಳಿಗಳಲ್ಲಿ ಪರಿಣತಿ ಇರುವವರಿಗೆ ವಿನಾಯಿತಿ ಇರುತ್ತದೆ).

  • ಕನಿಷ್ಠ 45 ವರ್ಷ ವಯಸ್ಸಾಗಿರಬೇಕು (ನ್ಯಾಯಮಂಡಳಿಗಳಲ್ಲಿ ವಾದ ಮಂಡಿಸುವವರಿಗೆ ವಿನಾಯಿತಿ ಇದೆ).

  • ಕಳೆದ ಎರಡು ವರ್ಷಗಳಲ್ಲಿ ಅರ್ಜಿಯು ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತವಾಗಿರಬಾರದು.

Also Read
ಸಂದರ್ಶನವನ್ನಷ್ಟೇ ಆಧರಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಅವಕಾಶ: ಯುಜಿಸಿ ನಿಯಮ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಿ, ಅಭಿಪ್ರಾಯಗಳನ್ನು ಕೂಡ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಸದವರನ್ನು ಕೂಡ ಪೂರ್ಣ ನ್ಯಾಯಾಲಯವು ಅವರ ಒಪ್ಪಿಗೆಯೊಂದಿಗೆ ಹುದ್ದೆಗೆ ಆಯ್ಕೆ ಮಾಡಲು ಅವಕಾಶ ಇರುತ್ತದೆ.

ತೀರ್ಮಾನವನ್ನು ಒಮ್ಮತ ಅಥವಾ ಬಹುಮತದ ಮೂಲಕ ಕೈಗೊಳ್ಳಲಾಗುತ್ತದೆ; ಕೆಲವು ನಿಯಮಿತ ಸಂದರ್ಭಗಳಲ್ಲಿ ಮಾತ್ರ ರಹಸ್ಯ ಮತದಾನ ನಡೆಯಬಹುದು. ಅರ್ಜಿ ತಿರಸ್ಕೃತವಾದ ಪ್ರಕರಣಗಳನ್ನು ಎರಡು ವರ್ಷ ನಂತರ ಮರುಪರಿಶೀಲಿಸಲು ಅವಕಾಶ ಇದೆ. ಜೊತೆಗೆ ಹಿರಿಯ ಹುದ್ದೆ ಸ್ಥಾನ ಪಡೆದ ವಕೀಲ ಅನರ್ಹ ಕೃತ್ಯ ಎಸಗಿದರೆ ಆತನ ಹಿರಿಯ ವಕೀಲಿಕೆ ಹುದ್ದೆಯನ್ನು ಹಿಂಪಡೆಯುವ ಅವಕಾಶವೂ ಇದೆ.

Attachment
PDF
Guidelines_for_Designation_of_Senior_Advocates_by_the_Supreme_Court_of_India__2026
Preview
Kannada Bar & Bench
kannada.barandbench.com