ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿ ರದ್ದುಗೊಳಿಸಿರುವ ಕುರಿತಂತೆ ವಿಚಾರಣೆ ಬಾಕಿ ಇರುವಾಗ ಸಾರ್ವಜನಿಕ ಹೇಳಿಕೆ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ಸಾರ್ವಜನಿಕ ಹುದ್ದೆಯಲ್ಲಿರುವವರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ [ಎಲ್ ಗುಲಾಂ ರಸೂಲ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಸಾರ್ವಜನಿಕ ಹುದ್ದೆಯಲ್ಲಿರುವವರು ತಮ್ಮ ಭಾಷಣದ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ರಾಜಕೀಯಗೊಳಿಸಬಾರದು ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಬಿ.ವಿ.ನಾಗರತ್ನ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠ ಹೇಳಿದೆ.
ಮೀಸಲಾತಿ ರದ್ದುಗೊಳಿಸಿದ ನಿರ್ಧಾರ ಪ್ರಶ್ನಿಸಿ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ದುಷ್ಯಂತ್ ದವೆ ಅವರು, ಪ್ರತಿದಿನ ಮೀಸಲಾತಿ ರದ್ದುಗೊಳಿಸಿರುವುದಾಗಿ ಕೇಂದ್ರ ಗೃಹ ಸಚಿವರು ಹೇಳಿಕೆ ನೀಡುತ್ತಾರೆ. ಸಾಲಿಸಿಟರ್ ಜನರಲ್ ಮೆಹ್ತಾ ಅದೇ ಪಕ್ಷಕಾರರನ್ನು ಪ್ರತಿನಿಧಿಸುತ್ತಾರೆ. ಇದು ನ್ಯಾಯಾಂಗ ನಿಂದನೆ ಎಂಬುದಾಗಿ ಅವರು ಆಕ್ಷೇಪಿಸಿದರು.
ಆಗ ನ್ಯಾ. ನಾಗರತ್ನ ಅವರು, “ಇದು ನಿಜವೇ ಆಗಿದ್ದರೆ ಅಂತಹ ಹೇಳಿಕೆ ಏಕೆ ನೀಡಲಾಗುತ್ತಿದೆ? ಸಾರ್ವಜನಿಕ ಹುದ್ದೆಯಲ್ಲಿರುವವರು ಕೆಲ ನಿಯಂತ್ರಣ ಹಾಕಿಕೊಳ್ಳಬೇಕು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ಬಗೆಯ ಹೇಳಿಕೆಗಳನ್ನು ನೀಡಬಾರದು” ಎಂದರು.
ರಾಜ್ಯ ಸರ್ಕಾರದ ಆದೇಶದ ಪ್ರಕಾರ ಮುಸ್ಲಿಂ ಸಮುದಾಯ ಇದೀಗ ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಅಡಿ ಶೇ 10ರಷ್ಟು ಮೀಸಲಾತಿ ಪಡೆಯುತ್ತಿದೆ. ಈ ಹಿಂದೆ ಅವರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರಿಗೆ ಸಮನಾಗಿ ಹಂಚಲು ಉದ್ದೇಶಿಸಲಾಗಿದೆ.
ಕಳೆದ ತಿಂಗಳು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಈ ಹಂಚಿಕೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿತ್ತು. ಸರ್ಕಾರ ತನ್ನ ನಿರ್ಧಾರಕ್ಕೆ ಬರಲು ಅಂತಿಮ ವರದಿಗಿಂತ ಮಧ್ಯಂತರ ವರದಿಯನ್ನು ಅವಲಂಬಿಸಿದೆ ಎಂದು ಅದು ಮೌಖಿಕವಾಗಿ ಗಮನಿಸಿತ್ತು.
ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಮುಂದಿನ ವಿಚಾರಣೆಯವರೆಗೆ ಆಕ್ಷೇಪಿಸಿರುವ ಮೀಸಲಾತಿಯಡಿ ಯಾವುದೇ ನೇಮಕಾತಿ ಅಥವಾ ಪ್ರವೇಶಾತಿ ಕಲ್ಪಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೀಠ ಆದೇಶಕ್ಕೆ ಯಾವುದೇ ತಡೆ ನೀಡಿರಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರತಿ-ಅಫಿಡವಿಟ್‌ನಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ಒದಗಿಸುವುದು ಅಸಾಂವಿಧಾನಿಕವಾಗಿರುವುದರಿಂದ ಯಾವ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ʼಅಪ್ರಸ್ತುತʼವಾಗುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮೀಸಲಾತಿ ರದ್ದಾಗಿರುವುದಕ್ಕೆ ಅರ್ಜಿದಾರರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇಂದಿನ ವಿಚಾರಣೆ
ಸಲಿಂಗ ವಿವಾಹ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ (ಮಧ್ಯಪ್ರವೇಶ ಕೋರಿರುವವರ ಪರವಾಗಿ) ತಾನು ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಸ್‌ಜಿ ಅವರು ಪ್ರಕರಣ ಮುಂದೂಡುವಂತೆ ಇಂದು ಕೋರಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ದವೆ “ಮುಂದಿನ ವಿಚಾರಣೆಯ ದಿನಾಂಕದ ಬದಲಿಗೆ ಮುಂದಿನ ಆದೇಶದವರೆಗೆ ಮಧ್ಯಂತರ ಆದೇಶವನ್ನು ಮುಂದುವರಿಸಬೇಕು” ಎಂದು ಹೇಳಿದರು. ಅವರು ಈ ಪ್ರಕರಣದಲ್ಲಿ ಏಕೆ ವಾದಿಸಲು ಮುಂದಾಗುತ್ತಿಲ್ಲ ಎಂಬುದು ತನಗೆ ತಿಳಿದಿದೆ ಎಂದರು.
ಗೃಹಸಚಿವರು ನೀಡಿದ್ದರೆನ್ನಲಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಎಸ್‌ಜಿ “ರಾಜಕೀಯ [ಆಪಾದನೆಗಳಿಗೆ] ನಾನು ಪ್ರತಿಕ್ರಿಯಿಸಲಾರೆ... ದವೆ ಅವರಂತೆ ಅರುಚಲಾರೆ” ಎಂದರು.
ಆಗ ದವೆ ಅವರು, ಸಂಬಂಧಪಟ್ಟ ಹೇಳಿಕೆಗಳನ್ನು ದಾಖಲೆಯಲ್ಲಿ ಸಲ್ಲಿಸಲು ತಾನು ಸಿದ್ಧ. ಹೇಳಿಕೆಗಳ ಬಗ್ಗೆ ಎಸ್‌ಜಿ ಅವರಿಗೆ ಈಗಾಗಲೇ ತಿಳಿದಿದೆ ಎಂದು ಹೇಳಿದರು.
ಈ ಹಂತದಲ್ಲಿ ಎಸ್‌ಜಿ ಅವರು ತಾನೊಬ್ಬ ನ್ಯಾಯಾಲಯದ ಅಧಿಕಾರಿಯಾಗಿದ್ದು, ಯಾವುದೇ ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ ಎಂದು ಹೇಳಿದರು. ಆಗ ದವೆ ಅವರು “ಇದು ಧರ್ಮವನ್ನು ಆಧರಿಸಿಲ್ಲ” ಎಂದು ಗಟ್ಟಿದನಿಯಲ್ಲಿ ತಿರುಗೇಟು ನೀಡಿದರು.
ಆಗ ಎಸ್‌ಜಿ ಮೆಹ್ತಾ “ನ್ಯಾಯಾಲಯ ದವೆ ಅವರನ್ನು ನಿಯಂತ್ರಿಸಬೇಕು. ನ್ಯಾಯಾಲಯವನ್ನು ಮೀನು ಮಾರುಕಟ್ಟೆಯಾಗಲು ಬಿಡಬಾರದು. ಇದುವೆರೆಗೆ ಯಾವ ನ್ಯಾಯಮೂರ್ತಿಗೂ ಅವರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಯಾರಾದರೊಬ್ಬ ನ್ಯಾಯಮೂರ್ತಿಗಳು ಕಡಿವಾಣ ಹಾಕಬೇಕು” ಎಂದು ಹೇಳಿದರು.
ಆಗ ನ್ಯಾ. ಜೋಸೆಫ್ “ನಾವು ಈ ರೀತಿಯ ರಾಜಕೀಯಕರಣವನ್ನು ಒಪ್ಪುವುದಿಲ್ಲ. ವಿಚಾರಣೆ ಆಲಿಸಲು ಸಿದ್ದವಾದಾಗ ನಾವು ಅದನ್ನು ಆಲಿಸಲಿದ್ದೇವೆ” ಎಂದರು.
ಈ ಹಿಂದೆ ಜಾರಿಯಲ್ಲಿದ್ದ ಮೀಸಲಾತಿಯೇ ಪ್ರಸ್ತುತ ಚಾಲ್ತಿಯಲ್ಲಿರಲಿದೆ ಎಂದು ಎಸ್‌ಜಿ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ ಬಳಿಕ ನ್ಯಾಯಾಲಯ ಜುಲೈ 25ರಂದು ವಿಚಾರಣೆ ನಡೆಸಲು ಪ್ರಕರಣವನ್ನು ಪಟ್ಟಿ ಮಾಡಿತು.
ವಿಚಾರಣೆ ಮುಕ್ತಾಯದ ಹಂತ ತಲುಪಿದಾಗ ದವೆ ಅವರು “ಅವರು ವಿಚಾರಣೆಯನ್ನು ಏಕೆ ವಿಳಂಬ ಮಾಡಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ” ಎಂದರು.
“ವಿವೇಕ ಮೇಲುಗೈ ಸಾಧಿಸಬೇಕು. ಇದು [ಪ್ರಕರಣದ] ಸಂಪೂರ್ಣ ರಾಜಕೀಯಗೊಳಿಸುವಿಕೆ. ನನಗೆ ಗೊತ್ತಿರುವಂತೆ (ಅಮಿತ್ ಶಾ ಅಂತಹ) ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಪ್ರಣಾಳಿಕೆಯಲ್ಲಿ ಸೇರಿಸಲು ಅಧಿಕಾರವಿದೆ. ಅಹಿತಕರ ಸನ್ನಿವೇಶದಲ್ಲಿ ಹೇಗೆ ವಾದ ಮಾಡಬೇಕೆಂದು ನನಗೆ ಸೂಚನೆ ಬಂದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.
ವಿಚಾರಣೆಯ ಕೊನೆಗೆ ನ್ಯಾ. ಜೋಸೆಫ್ “ಪ್ರಕರಣ ಕುರಿತು ಸಾರ್ವಜನಿಕ ಹೇಳಿಕೆ ನೀಡಬಾರದು” ಎಂದರು.
ಅಂತಹ ಆಕ್ಷೇಪಾರ್ಹ ಭಾಷಣಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಿಸುವಂತೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಅರ್ಜಿದಾರರಲ್ಲಿ ಒಬ್ಬರು) ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರು ಒತ್ತಾಯಿಸಿದರು. ಈ ಮನವಿಯನ್ನು ಕೂಡ ಪೀಠ ನಿರಾಕರಿಸಿತು.