ಖಾಸಗಿ ಕಂಪನಿಯಿಂದ 200 ಮೆಗಾವ್ಯಾಟ್ ವಿದ್ಯುತ್ ಖರೀದಿಸುವಂತೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗೆ (ಡಿಸ್ಕಾಂ) ರಾಜಸ್ಥಾನ ಹೈಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರಿ ಸಂಸ್ಥೆಗೆ ಹಾನಿಯಾಗುವಂತೆ ಹೈಕೋರ್ಟ್ ಮ್ಯಾಂಡಮಸ್ ರಿಟ್ ಹೊರಡಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಹೊರಬೇಕಿದ್ದು, ಅದು ಗ್ರಾಹಕರಿಗೆ ವರ್ಗವಾಗುತ್ತದೆ. ಗ್ರಾಹಕರ ಕುರಿತಾದ ವಿಶಾಲ ಹಿತಾಸಕ್ತಿ ಮತ್ತು ತತ್ಪರಿಣಾಮದ ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಹೈಕೋರ್ಟ್ ಆದೇಶ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಮತ್ತು ಡಿಸ್ಕಾಂಗಳ ಹಿತಾಸಕ್ತಿಗಳನ್ನು ಸರಿದೂಗಿಸಬೇಕಾಗುತ್ತದೆಯೇ ವಿನಾ ವಿದ್ಯುತ್ ಉತ್ಪಾದಕರ ಹಿತಾಸಕ್ತಿ ರಕ್ಷಿಸುವಂತಹ ಅಸಮ ನಿಲುವು ತಾಳಲು ಅನುಮತಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಮಧ್ಯಪ್ರದೇಶ ಮೂಲದ ಖಾಸಗಿ ಕಂಪನಿ ಎಂ ಬಿ ಪವರ್ ಪ್ರೈವೇಟ್ ಲಿಮಿಟೆಡ್‌ನಿಂದ ವಿದ್ಯುತ್ ಖರೀದಿಸುವಂತೆ ಜೈಪುರ ವಿದ್ಯುತ್ ವಿತರಣಾ ನಿಗಮಕ್ಕೆ ನಿರ್ದೇಶನ ನೀಡಿದ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ವಿವಿಧ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು.
ಮತ್ತೊಬ್ಬ ಪೂರೈಕೆದಾರನ ಹರಾಜು ದರ ಕಡಿಮೆ ಇದ್ದರೂ ಈ ಆದೇಶ ನೀಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಕಂಡುಕೊಂಡಿದೆ.
ವಿದ್ಯುತ್ ಕಾಯಿದೆಯಡಿ ಲಭ್ಯವಿರುವ ಪರಿಹಾರಗಳನ್ನು ಪಡೆಯದೆ ಖಾಸಗಿ ವಿದ್ಯುತ್ ಕಂಪನಿ ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿ ಆಧರಿಸಿ ಮ್ಯಾಂಡಮಸ್ ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಇಂತಹ ರಿಟ್ ಅರ್ಜಿಯನ್ನು ಹೈಕೋರ್ಟ್ ನೇರವಾಗಿ ಪರಿಗಣಿಸಬಾರದಿತ್ತು ಎಂದು ಅದು ಹೇಳಿದೆ.
ಬಿಡ್ಡಿಂಗ್ ಪ್ರಕ್ರಿಯೆಯು ಪಾರದರ್ಶಕವೆಂದು ಕಂಡುಬಂದ ನಂತರ ಬಿಡ್‌ದಾರರು ಉಲ್ಲೇಖಿಸಿದ ದರಗಳು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳೊಂದಿಗೆ ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಲು ಬಿಡ್ ಮೌಲ್ಯಮಾಪನ ಸಮಿತಿಯ ಅಗತ್ಯವಿಲ್ಲ ಎಂದು ತೀರ್ಮಾನಿಸಿದ ಎಪಿಟಿಇಎಲ್ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಲಿಲ್ಲ. ಎಪಿಟಿಇಎಲ್‌ನ ಬದಲಿ ವ್ಯಾಖ್ಯಾನ ವಿದ್ಯುತ್ ಕಾಯಿದೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾದ ಗ್ರಾಹಕರ ರಕ್ಷಣೆಯನ್ನು ಸೋಲಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜೈಪುರ ವಿದ್ಯುತ್ ವಿತರಣಾ ನಿಗಮ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿದ ನ್ಯಾಯಾಲಯ ದಾವೆ ವೆಚ್ಚವಾಗಿ ತಲಾ 5 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ಮತ್ತು ಡಿಸ್ಕಾಂಗೆ ಪಾವತಿಸುವಂತೆ ಎಂಬಿ ಪವರ್ ಕಂಪೆನಿಗೆ ನಿರ್ದೇಶನ ನೀಡಿತು.
ಹಿರಿಯ ವಕೀಲ ಪಿ.ಚಿದಂಬರಂ ಅವರು ಜೈಪುರ ವಿದ್ಯುತ್ ವಿತರಣಾ ನಿಗಮವನ್ನು ಪ್ರತಿನಿಧಿಸಿದ್ದರು. ಎಂ ಬಿ ಪವರ್ (ಮಧ್ಯಪ್ರದೇಶ) ಪ್ರೈವೇಟ್ ಲಿಮಿಟೆಡ್ ಪರವಾಗಿ ಹಿರಿಯ ವಕೀಲರಾದ ಎ ಎಂ ಸಿಂಘ್ವಿ ಹಾಗೂ ಸಿ.ಎಸ್ ವೈದ್ಯನಾಥನ್ ವಾದ ಮಂಡಿಸಿದ್ದರು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]