ಎಸ್‌ಸಿಬಿಎ ಹುದ್ದೆಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ: ಸುಪ್ರೀಂ ಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ) ಕಾರ್ಯಕಾರಿ ಸಮಿತಿಯಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಈ ವರ್ಷ, ಸಂಘದ ಮೂವರು ಕಾರ್ಯಕಾರಿ ಸದಸ್ಯರು, ಇಬ್ಬರು ಹಿರಿಯ ಕಾರ್ಯಕಾರಿ ಸದಸ್ಯರು ಹಾಗೂ ಖಜಾಂಚಿ ಹುದ್ದೆಗಳಲ್ಲಿ ಮಹಿಳೆಯರು ಇರಬೇಕು ಎಂದು ನ್ಯಾಯಾಲಯ ತಿಳಿಸಿದೆ. ಈ ಮೀಸಲಾತಿ ಎಸ್‌ಸಿಬಿಎ ಅಧ್ಯಕ್ಷ ಗಾದಿಗೆ ಅನ್ವಯಿಸುವುದಿಲ್ಲ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ
ಈ ಹಿಂದೆ ಇದೇ ರೀತಿಯ ಪ್ರಕರಣ ದೆಹಲಿ ಹೈಕೋರ್ಟ್ ಅಂಗಳದಲ್ಲಿತ್ತು. ವಕೀಲೆಯರಿಗಾಗಿ ಕಾರ್ಯಕಾರಿ ಸಮಿತಿಯಲ್ಲಿ ಕನಿಷ್ಠ ಎರಡು ಹುದ್ದೆ ಮೀಸಲಿಡಲು ಎಸ್‌ಸಿಬಿಎ ನಿಯಮಗಳಿಗೆ ತಿದ್ದುಪಡಿ ತರುವ ಸಂಬಂಧ ಎರಡು ತಿಂಗಳಲ್ಲಿ ಸಾಮಾನ್ಯ ಸಭೆ ಕರೆಯಲಾಗುವುದು ಎಂದು ಕಳೆದ ಫೆಬ್ರುವರಿ 29 ರಂದು ಎಸ್‌ಸಿಬಿಎ ಅಧ್ಯಕ್ಷ ಆದಿಶ್ ಅಗರ್‌ವಾಲಾ ಹೈಕೋರ್ಟ್‌ಗೆ ಭರವಸೆ ನೀಡಿದ್ದರು.
ಈ ವಿಚಾರ ಚರ್ಚಿಸಲು ಎಸ್‌ಸಿಬಿಎ ಸಭೆ ಕರೆಯಲು ನಿರ್ದೇಶನ ನೀಡುವಂತೆ ಅರ್ಜಿದಾರೆ ಹಾಗು ವಕೀಲೆ ಯೋಗಮಯಾ ಎಂ ಜಿ ಕೋರಿದ್ದ ಹಿನ್ನೆಲೆಯಲ್ಲಿ ಸಂಘ ಈ ಭರವಸೆ ನೀಡಿತ್ತು.
ಎಸ್‌ಸಿಬಿಎಯ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ವಕೀಲರಿಗೆ ಕನಿಷ್ಠ ಎರಡು ಸ್ಥಾನಗಳನ್ನು ಮೀಸಲಿಡುವುದಕ್ಕಾಗಿ ಎಸ್‌ಸಿಬಿಎ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸೂಚಿಸಲು ತಾನು ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ಗೆ ಪತ್ರ ಬರೆದಿದ್ದಾಗಿ ಯೋಗಮಾಯಾ ತಿಳಿಸಿದ್ದರು.
ಎಸ್‌ಸಿಬಿಎಯಲ್ಲಿ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆ ತರಲು ಮತ್ತು ಲಿಂಗ ಸಮಾನತೆ ಉತ್ತೇಜಿಸಲು ಇಂತಹ ತಿದ್ದುಪಡಿ ನಿರ್ಣಾಯಕವಾಗಿದೆ ಎಂದು ಯೋಗಮಾಯಾ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದರು.
ಸಂಘದಲ್ಲಿ ಮಹಿಳಾ ವಕೀಲರ ಪ್ರಾತಿನಿಧ್ಯ ಇಲ್ಲದಿರುವುದು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಹಿರಂಗಪಡಿಸದ ವಾತಾವರಣವನ್ನು ಶಾಶ್ವತಗೊಳಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಎಸ್‌ಸಿಬಿಎ ಅಧ್ಯಕ್ಷರು, ಎಸ್‌ಸಿಬಿಎಯ ಸುಮಾರು 20,000 ಸದಸ್ಯರಿಗೆ ನೋಟಿಸ್ ಕಳುಹಿಸಬೇಕಾಗಿರುವುದರಿಂದ ಸಮಸ್ಯೆಯನ್ನು ಚರ್ಚಿಸಲು ಸಾಮಾನ್ಯ ಸಭೆ ಕರೆಯಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.
ಅಧ್ಯಕ್ಷರ ಭರವಸೆಯನ್ನು ಗಣನೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತ್ತು.