ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ
Nambi Narayanan and Supreme Court

ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಇದೊಂದು ಗಂಭೀರ ವಿಷಯವಾಗಿದ್ದು ಗಹನ ತನಿಖೆಯ ಅಗತ್ಯವಿದೆ ಎಂಬುದಾಗಿ ವರದಿ ಹೇಳಿದ್ದು ಇದು (ಪೊಲೀಸರ) ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇಸ್ರೋ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ತಪ್ಪಾಗಿ ಬಂಧಿಸಿರುವ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಗುರುವಾರ ಸಿಬಿಐಗೆ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಿ ಕೆ ಜೈನ್ ಅವರು ಸಲ್ಲಿಸಿದ ವರದಿಯನ್ನು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠ ಅಧಿಕೃತವಾಗಿ ಪರಿಗಣಿಸಿತು. ನಾರಾಯಣನ್‌ ವಿರುದ್ಧ ಕೇರಳ ಪೊಲೀಸ್‌ ಅಧಿಕಾರಿಗಳು ಮಾಡಿದ ತಪ್ಪುಗಳ ಬಗ್ಗೆ ನ್ಯಾ. ಜೈನ್‌ ಅವರು ಪರಿಶೀಲಿಸಿ ವರದಿ ಸಲ್ಲಿಸಿದ್ದರು.

“ಇದೊಂದು ಗಂಭೀರ ವಿಷಯ, ಗಹನ ತನಿಖೆಯ ಅಗತ್ಯವಿದೆ ಎಂಬುದಾಗಿ ವರದಿ ಹೇಳಿದ್ದು ಇದು (ಪೊಲೀಸರ) ನಿರ್ಲಕ್ಷ್ಯವನ್ನು ಸೂಚಿಸುತ್ತದೆ” ಎಂದಿರುವ ನ್ಯಾಯಾಲಯವು ತಾನು ಆಯೋಗವನ್ನು ತೀರ್ಪು ನೀಡುವಂತೆ ಕೇಳಿಲ್ಲ ಆದರೆ ನ್ಯಾಯಾಲಯಕ್ಕೆ ಸಹಾಯ ಮಾಡಲು ಕೇಳಿದ್ದು, ಹೆಚ್ಚಿನ ತನಿಖೆಯನ್ನು ಸಿಬಿಐ ನಡೆಸಬೇಕಾಗುತ್ತದೆ ಎಂಬುದಾಗಿ ವಿವರಿಸಿದೆ.

"ವರದಿಯ ಒಂದು ಪ್ರತಿಯನ್ನು ಸಿಬಿಐ ನಿರ್ದೇಶಕರು ಅಥವಾ ಕಾರ್ಯಕಾರಿ ನಿರ್ದೇಶಕರಿಗೆ ರವಾನಿಸಲು ನಾವು ಸುಪ್ರೀಂಕೋರ್ಟ್ ರೆಜಿಸ್ಟ್ರಿಗೆ ನಿರ್ದೇಶಿಸುತ್ತಿದ್ದೇವೆ. ಸಿಬಿಐ ಕಾನೂನಿನ ಪ್ರಕಾರ ಮುಂದುವರೆಯಲಿದೆ. ವರದಿಯನ್ನು ಪ್ರಾಥಮಿಕ ವರದಿಯಾಗಿ ಪರಿಗಣಿಸಲು ಸಿಬಿಐ ಮುಕ್ತವಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ. ವರದಿಯ ನಕಲನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಕೂಡ ಪೀಠ ತಿಳಿಸಿದ್ದು ಸಿಬಿಐ 3 ತಿಂಗಳೊಳಗೆ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕೆಂದು ಗಡುವು ನೀಡಿದೆ.

Also Read
ಎಂಡೋಸಲ್ಫಾನ್ ದುರಂತ 'ಸುಳ್ಳು' ಫಲಕ ಹಿಡಿದಿದ್ದ ಆರೋಪಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾಕ್ಕೆ ಕೇರಳ ಹೈಕೋರ್ಟ್ ನಕಾರ

ಇಸ್ರೋದ ವಿಜ್ಞಾನಿಯಾದ ನಂಬಿ ನಾರಾಯಣನ್‌ ಅವರು ಕ್ರಯೋಜೆನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ವಿರುದ್ಧ 1994ರಲ್ಲಿ, ರಕ್ಷಣಾ ರಹಸ್ಯಗಳನ್ನು ಶತ್ರು ದೇಶಗಳಿಗೆ ಸೋರಿಕೆ ಮಾಡಿದ ಸುಳ್ಳು ಆರೋಪ ಹೊರಿಸಲಾಯಿತು. ಅಧಿಕೃತ ರಹಸ್ಯ ಕಾಯಿದೆಯಡಿ ಕೇರಳ ಪೊಲೀಸರು ವಿಜ್ಞಾನಿಯನ್ನು ಬಂಧಿಸಿದ್ದರು. 1998ರಲ್ಲಿ ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಪ್ರಕರಣ ಹೆಣೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಅವರು ದಾವೆ ಹೂಡಿದ್ದರು. ತನ್ನ ಹೇಳಿಕೆ ಪಡೆಯುವುದಕ್ಕಾಗಿ ಕೇರಳ ಪೊಲೀಸ್‌ ಮತ್ತು ಗುಪ್ತಚರ ದಳ ಹಿಂಸಿಸಿತ್ತು ಎಂದು ಅವರು ಆರೋಪಿಸಿದ್ದರು. ತನಗೆ ಉಂಟಾದ ಚಿತ್ರಹಿಂಸೆ ಮತ್ತು ಸಂಕಟಗಳಿಗೆ ಪರಿಹಾರ ನೀಡಬೇಕೆಂದು ಕೋರಿ ಅವರು ಈ ಮೊದಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್‌ಎಚ್‌ಆರ್‌ಸಿ) ಸಂಪರ್ಕಿಸಿದ್ದರು. ಮಧ್ಯಂತರ ಪರಿಹಾರವಾಗಿ ರೂ.10 ಲಕ್ಷ ಹಣವನ್ನು ನಂಬಿ ಅವರಿಗೆ ನೀಡುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿತ್ತು.

ತಪ್ಪೆಸಗಿದ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಂಬಿ ಅವರು ಕೇರಳ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠ ಅವರ ಮನವಿಯನ್ನು ಪುರಸ್ಕರಿಸಿತಾದರೂ ವಿಭಾಗೀಯ ಪೀಠ ಅದನ್ನು ಒಪ್ಪದೇ ಇದ್ದುದರಿಂದ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ನಂಬಿ ಅವರ ವಿರುದ್ಧ ಕ್ರಮ ಜರುಗಿಸಿದ್ದು ದುರುದ್ದೇಶಪೂರ್ವಕ ಮತ್ತು ಅವರಿಗೆ ಅಪಾರ ಕಿರುಕುಳ ನೀಡಲಾಗಿದೆ ಎಂದು 2018 ರ ಸೆಪ್ಟೆಂಬರ್‌ನಲ್ಲಿ ಅಭಿಪ್ರಾಯಪಟ್ಟ ನ್ಯಾಯಾಲಯ ಅವರಿಗೆ ರೂ.50 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತಲ್ಲದೆ ತಪ್ಪೆಸಗಿದ ಪೊಲೀಸರ ವಿರುದ್ಧ ಕ್ರ,ಮ ಕೈಗೊಳ್ಳಬೇಕೆ ಎಂಬ ಕುರಿತು ಡಿ ಕೆ ಜೈನ್‌ ನೇತೃತ್ವದ ಸಮಿತಿ ರಚಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ಸಮಿತಿ ಮೊಹರು ಹಾಕಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ನೀಡಿತ್ತು.

ನ್ಯಾ. ಜೈನ್‌ ಅವರ ವರದಿ ಸ್ವೀಕರಿಸುವಂತೆ ಮತ್ತು ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ತನ್ನನ್ನೂ ಪಕ್ಷಕಾರನನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು.

No stories found.
Kannada Bar & Bench
kannada.barandbench.com