ಅಸ್ಸಾಂ ಬಂಧನ ಶಿಬಿರದಲ್ಲಿರುವ 17 ವಿದೇಶಿಯರನ್ನು ಗಡಿಪಾರು ಮಾಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಶಿಬಿರದಲ್ಲಿರುವ 17 ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ ಎಂದು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ನೀಡಿತು.
Supreme Court, Assam
Supreme Court, Assam

ಅಸ್ಸಾಂ ಶಿಬಿರಗಳಲ್ಲಿ ಪ್ರಸ್ತುತ ಬಂಧಿತರಾಗಿರುವ 17 ವಿದೇಶಿಯರನ್ನು ಗಡಿಪಾರು ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ರಾಜುಬಾಲಾ ದಾಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಶಿಬಿರದಲ್ಲಿರುವ 17 ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ ಎಂದು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ನೀಡಿತು.

“ಅಸ್ಸಾಂನಲ್ಲಿ ಪರಿವರ್ತನಾ ಶಿಬಿರವೆಂದೂ ಕರೆಯಲಾಗುವ ಬಂಧನ ಕೇಂದ್ರವಿದೆ ಎಂದು ವರದಿ ಹೇಳುತ್ತದೆ. ಬಂಧನ ಕೇಂದ್ರದಲ್ಲಿ 17 ಘೋಷಿತ ವಿದೇಶಿಯರನ್ನು ಬಂಧಿಸಲಾಗಿದೆ ಅವರಲ್ಲಿ ನಾಲ್ವರು ಎರಡು ವರ್ಷಗಳನ್ನು ಕಳೆದಿದ್ದಾರೆ. 17 ವಿದೇಶಿಯರ ವಿರುದ್ಧ ಯಾವುದೇ ಅಪರಾಧ ದಾಖಲಾಗಿಲ್ಲವಾದ್ದರಿಂದ ಅವರನ್ನು ಗಡಿಪಾರು ಮಾಡಲು ಒಕ್ಕೂಟ (ಕೇಂದ್ರ ಸರ್ಕಾರ) ಕೂಡಲೇ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇವೆ. 2 ವರ್ಷಗಳ ಕಾಲ ಬಂಧಿತರಾಗಿರುವ 4 ಮಂದಿಗೆ ಆದ್ಯತೆ ನೀಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಈ ಸಂಬಂಧ ಎರಡು ತಿಂಗಳೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿದ್ದು ಜುಲೈ 26ರಂದು ಮುಂದಿನ ವಿಚಾರಣೆ ನಡೆಯಲಿದೆ.

ಅನುಮಾನಾಸ್ಪದ ಪೌರತ್ವ ಹೊಂದಿರುವವರು ಮತ್ತು ನ್ಯಾಯಮಂಡಳಿಗಳಿಂದ ವಿದೇಶಿಯರೆಂದು ಪರಿಗಣಿತರಾದವರನ್ನುಇರಿಸಲು ಬಳಸುವ ಅಸ್ಸಾಂನ ಬಂಧನ ಕೇಂದ್ರಗಳ ಸ್ಥಿತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ.

ಇಂದಿನ ವಿಚಾರಣೆ ವೇಳೆ ನ್ಯಾ. ಓಕಾ ಅವರು 17 ವಿದೇಶಿಯರಿಗೆ ಭಾರತೀಯ ನಾಗರಿಕರಿಗೆ ನೀಡಬೇಕಾದ ಸೌಲಭ್ಯಗಳನ್ನೇ ನೀಡಲಾಗುತ್ತಿದೆ ಎಂದು ಲಘು ಧಾಟಿಯಲ್ಲಿ ಹೇಳಿದರು. ವಿಚಾರಣೆಗೆ ಬಾಕಿ ಇರುವವರನ್ನು ಗಡಿಪಾರು ಮಾಡುವ ವಿಧಾನದ ಬಗ್ಗೆ ನ್ಯಾಯಮೂರ್ತಿ ಭುಯಾನ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

“ಈ ವಿದೇಶಿಯರ ನ್ಯಾಯಮಂಡಳಿಗಳು ಒಮ್ಮೆ ಅವರನ್ನು ವಿದೇಶಿಯರು ಎಂದು ಪತ್ತೆಹಚ್ಚಿದ ನಂತರ ಮುಂದೇನಾಗುತ್ತದೆ? ನೀವು (ಕೇಂದ್ರ) ನೆರೆಯ ದೇಶಗಳೊಂದಿಗೆ ಗಡೀಪಾರು ಒಪ್ಪಂದ ಮಾಡಿಕೊಂಡಿದ್ದೀರಾ? (ಒಪ್ಪಂದವಿಲ್ಲದೆ) ಅವರನ್ನು ಅಲ್ಲಿಗೆ ಕಳಿಸಬಹುದೇ? ಶಿಬಿರಗಳಲ್ಲೇ ಅವರನ್ನು ಇರಿಸಿಕೊಳ್ಳಲು ಆಗುವುದಿಲ್ಲ” ಎಂದರು.

Kannada Bar & Bench
kannada.barandbench.com