ಅಲಹಾಬಾದ್ ಹೈಕೋರ್ಟ್ 2014ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದ್ದು, ದೆಹಲಿಗೆ ಹೊಂದಿಕೊಂಡ ನೊಯಿಡಾದಲ್ಲಿ ಸೂಪರ್ ಟೆಕ್ ಲಿಮಿಟೆಡ್ ನಿರ್ಮಿಸಿದ್ದ ಎಮರಾಲ್ಡ್ ಕೋರ್ಟ್ ಯೋಜನೆಯ 40 ಅಂತಸ್ತಿನ ಅವಳಿ ಕಟ್ಟಡ ಕೆಡವಲು ಸೂಚಿಸಿದೆ.
ಅವಳಿ ಕಟ್ಟಡಗಳನ್ನು ಕೆಡವುವ ಪ್ರಕ್ರಿಯೆ ಮೂರು ತಿಂಗಳೊಳಗೆ ಪೂರ್ಣಗೊಳ್ಳಬೇಕು ಮತ್ತು ಅದರ ವೆಚ್ಚವನ್ನು ಬಿಲ್ಡರ್ ಭರಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಆದೇಶಿಸಿತು. ಅಲ್ಲದೆ ಕಟ್ಟಡಗಳ ಫ್ಲಾಟ್ ಮಾಲೀಕರಿಗೆ ಶೇ 12ರ ಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡಬೇಕು ಎಂದು ಕೂಡ ನ್ಯಾಯಾಲಯ ಆದೇಶಿಸಿದೆ.
ಅವಳಿ ಕಟ್ಟಡ ಕಟ್ಟಲು ನವೆಂಬರ್ 2009 ರಲ್ಲಿ ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಎನ್‌ಒಐಡಿಎ- NOIDA) ಸೂಪರ್‌ಟೆಕ್‌ಗೆ ಮಾಡಿದ ಮಂಜೂರಾತಿಯಲ್ಲಿ ಕನಿಷ್ಠ ಅಂತರದ ಅವಶ್ಯಕತೆ ಮತ್ತು ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಾಧಿಕಾರ ಮತ್ತು ಬಿಲ್ಡರ್ ನಡುವಿನ ಒಪ್ಪಂದದಿಂದಾಗಿ ಈ ಅಕ್ರಮ ನಿರ್ಮಾಣ ಸಾಧ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನಗರಪ್ರದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಭೂಮಿಯ ಮೌಲ್ಯ ಸಂಶಯಾಸ್ಪದ ವ್ಯವಹಾರಗಳಿಗೆ ಕಾರಣವಾಗುತ್ತಿರುವುದು ಸುಪ್ರೀಂಕೋರ್ಟ್‌ನ ಹಿಂದಿನ ಹಲವು ತೀರ್ಪುಗಳಿಂದ ತಿಳಿದು ಬಂದಿದೆ ಎಂದು ನ್ಯಾಯಾಲಯ ಹೇಳಿದೆ. ಡೆವಲಪರ್‌ಗಳು ಮತ್ತು ಯೋಜನಾ ಅಧಿಕಾರಿಗಳು ಕೈಜೋಡಿಸಿರುವ ಇಂತಹ ವಿದ್ಯಮಾನಗಳು ಗುರುತರವಾಗಿ ಹೆಚ್ಚಿವೆ. ಫ್ಲಾಟ್ ಖರೀದಿದಾರರು ಇದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಬಿಲ್ಡರ್‌ಗಳ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ಹಾಜರಾದರು. ಹಿರಿಯ ನ್ಯಾಯವಾದಿ ಜಯಂತ್ ಭೂಷಣ್ ಅವರು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಪರ ವಾದ ಮಂಡಿಸಿದರು. ಅಮಿಕಸ್ ಕ್ಯೂರಿಯಾಗಿ ವಕೀಲ ಗೌರವ್ ಅಗರ್ವಾಲ್ ಕರ್ತವ್ಯ ನಿರ್ವಹಿಸಿದರು. ಮನೆ ಖರೀದಿದಾರರ ಪರವಾಗಿ ವಕೀಲ ಅಬ್ರಹಾಂ ಮ್ಯಾಥ್ಯೂಸ್ ವಾದಿಸಿದರು. ಯೋಜನೆಯ ಫಲಾನುಭವಿಗಳ ಪರವಾಗಿ ಖೇತಾನ್ ಅಂಡ್ ಕಂಪನಿಯ ವಕೀಲರಾದ ಅಜಯ್ ಭಾರ್ಗವ ಮತ್ತು ತ್ರಿಶಾಲಾ ತ್ರಿವೇದಿ ಹಾಜರಿದ್ದರು.