
ಸುಪ್ರೀಂ ಕೋರ್ಟ್ ಶುಕ್ರವಾರ ಚಂಡೀಗಢ ಮೂಲದ ಪತ್ರಕರ್ತ ಅಜಯ್ ಶುಕ್ಲಾ ಮತ್ತು ಅವರ ಯೂಟ್ಯೂಬ್ ಚಾನೆಲ್, ದ ಪ್ರಿನ್ಸಿಪಲ್‌ಗೆ (ವರಪ್ರದ್ ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಒಡೆತನದ ಯೂಟ್ಯೂಬ್ ವಾಹಿನಿ) ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರೊಬ್ಬರ ವಿರುದ್ಧ ಮಾಡಿರುವ ಕಳಂಕಕಾರಿ ಆರೋಪಗಳ ವಿಡಿಯೋವನ್ನು ತೆಗೆದುಹಾಕಲು ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸೀಹ್ ಮತ್ತು ಅತುಲ್ ಎಸ್ ಚಂದೂರ್ಕರ್ ಅವರ ತ್ರಿಸದಸ್ಯ ಪೀಠವು ಆ ವಿಡಿಯೋವನ್ನು ಪ್ರದರ್ಶಿಸದಂತೆ ಆದೇಶಿಸಿದೆ.
"ಅಜಯ್ ಶುಕ್ಲಾ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ನಾವು ರಿಜಿಸ್ಟ್ರಿಗೆ ನಿರ್ದೇಶಿಸುತ್ತೇವೆ. ಯೂಟ್ಯೂಬ್ ಚಾನೆಲ್ ಅನ್ನು ಪಕ್ಷ ಪ್ರತಿವಾದಿಯನ್ನಾಗಿ ಮಾಡಲಾಗುತ್ತದೆ. ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಕೋರಲಾಗಿದೆ. ಮಧ್ಯಂತರ ಆದೇಶದ ಮೂಲಕ, ವಿಡಿಯೋ ಪ್ರದರ್ಶಿಸದಂತೆ ನಿಲ್ಲಿಸಲು ಮತ್ತು ವಿಡಿಯೋವನ್ನು ತಕ್ಷಣವೇ ತೆಗೆದುಹಾಕಲು ನಾವು ಯೂಟ್ಯೂಬ್ ಚಾನೆಲ್‌ಗೆ ನಿರ್ದೇಶಿಸುತ್ತೇವೆ" ಎಂದು ನ್ಯಾಯಾಲಯ ಆದೇಶಿಸಿದೆ.
"ಇದು ತುಂಬಾ ಗಂಭೀರ ವಿಚಾರವಾಗಿದೆ. ಸ್ವಯಂಪ್ರೇರಿತವಾಗಿ ಪ್ರಕರಣ ತೆಗೆದುಕೊಳ್ಳಲಾಗಿದೆ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳೊಬ್ಬರ ವಿರುದ್ಧ ವಿವಾದಾಸ್ಪದ ಆರೋಪಗಳನ್ನು ವಿಡಿಯೋ ಹೊಂದಿದೆ ಎನ್ನುವ ಅಂಶವನ್ನು ನ್ಯಾಯಾಲಯವು ಗಮನಿಸಿತು.
"ಈ ವಿಡಿಯೋ ಕ್ಲಿಪ್‌ನಲ್ಲಿ ಶುಕ್ಲಾ ಅವರು ಈ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಯೊಬ್ಬರ ಬಗ್ಗೆ ಅವಹೇಳನಕಾರಿ ಅವಲೋಕನಗಳನ್ನು ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುವ ಇಂತಹ ಕಳಂಕ ತರುವಂತಹ ಆರೋಪಗಳು ನ್ಯಾಯಾಂಗದ ಗೌರವಕ್ಕೆ ಅಪಖ್ಯಾತಿ ತರುವ ಸಾಧ್ಯತೆಯಿದೆ" ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
"ವರಪ್ರದ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಡಿಜಿಟಲ್ ಚಾನೆಲ್‌ನ ಪ್ರಧಾನ ಸಂಪಾದಕ ಅಜಯ್ ಶುಕ್ಲಾ ಮಾಡಿರುವ ಕಳಂಕಕಾರಿ ಆರೋಪಗಳು" ಎಂಬ ಶೀರ್ಷಿಕೆಯಡಿಯಲ್ಲಿ ನ್ಯಾಯಾಲಯವು ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಲಯ ನಿಂದನೆ ಪ್ರಕರಣವನ್ನು ಆರಂಭಿಸಿದೆ.
ಶುಕ್ಲಾ ಅವರ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ ಅವರು ಇತ್ತೀಚೆಗೆ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರ ನಿವೃತ್ತಿಯ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿರುವುದು ತಿಳಿದುಬಂದಿದೆ.
ವಿಡಿಯೋದ ಶೀರ್ಷಿಕೆಯುಲ್ಲಿ ನ್ಯಾಯಮೂರ್ತಿ ತ್ರಿವೇದಿ ಅವರನ್ನು "ಗೋದಿ ನ್ಯಾಯಮೂರ್ತಿ" ಎಂದು ಉಲ್ಲೇಖಿಸಲಾಗಿದೆ - ಕೇಂದ್ರ ಸರ್ಕಾರದ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ವಿವರಿಸಲು 'ಗೋದಿ' ಎಂಬ ಪದವನ್ನು ಹಿಂದಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಮಾಲೀಕರ ತೊಡೆಯ ಮೇಲೆ ಕುಳಿತು ಅವರ ಅಣತಿಯನ್ನು ಪಾಲಿಸುವವರು ಎನ್ನುವ ಅರ್ಥವನ್ನು ಇದು ಸೂಚ್ಯವಾಗಿ ತಿಳಿಸುತ್ತದೆ.
ಭಾರತದ ಸಂವಿಧಾನವು ವಾಕ್ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆಯಾದರೂ, ಆ ಹಕ್ಕನ್ನು ನ್ಯಾಯಾಧೀಶರ ವಿರುದ್ಧ ಮಾನನಷ್ಟ ಆರೋಪಗಳನ್ನು ಮಾಡಲು ದುರುಪಯೋಗಪಡಿಸಿಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ಆದೇಶದಲ್ಲಿ ಹೇಳಿದೆ.