ಕೋವಿಡ್‌ಗೆ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಲು ಮಾರ್ಗಸೂಚಿ ರೂಪಿಸುವಂತೆ ಎನ್‌ಡಿಎಂಎಗೆ ಆದೇಶಿಸಿದ ಸುಪ್ರೀಂ

ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 12ರ ಅಡಿ ಕೃಪಾನುದಾನ ಒದಗಿಸುವುದು ಸೇರಿದಂತೆ ಕನಿಷ್ಠ ಮಾನದಂಡಗಳ ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸುವುದು ಕಡ್ಡಾಯವಾಗಿದೆ ಮತ್ತು ಅದು ವಿವೇಚನಾಧಿಕಾರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಕೋವಿಡ್‌ಗೆ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಲು ಮಾರ್ಗಸೂಚಿ ರೂಪಿಸುವಂತೆ ಎನ್‌ಡಿಎಂಎಗೆ ಆದೇಶಿಸಿದ ಸುಪ್ರೀಂ
Published on

ಕೋವಿಡ್‌ಗೆ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಕೃಪಾನುದಾನ ನೀಡುವ ಸಂಬಂಧ ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ.

ಕೃಪಾನುದಾನದ ಮೊತ್ತ ಎಷ್ಟು ಇರಬೇಕು ಎಂದು ನಿರ್ಧರಿಸುವುದು ಎನ್‌ಡಿಎಂಎಗೆ ಬಿಟ್ಟದ್ದು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಅಲ್ಲದೆ ಮಾರ್ಗಸೂಚಿಗಳನ್ನು 6 ತಿಂಗಳೊಳಗೆ ಜಾರಿಗೆ ತರಬೇಕು ಎಂದು ಕೂಡ ಅದು ಸೂಚಿಸಿತು.

Also Read
ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ₹4 ಲಕ್ಷ ಕೃಪಾನುದಾನ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 12ರ ಅಡಿ ಕೃಪಾನುದಾನ ಒದಗಿಸುವುದು ಸೇರಿದಂತೆ ಕನಿಷ್ಠ ಮಾನದಂಡಗಳ ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸುವುದು ಕಡ್ಡಾಯವಾಗಿದೆ ಮತ್ತು ಅದು ವಿವೇಚನಾಧಿಕಾರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅದನ್ನು ಮಾಡಲು ವಿಫಲವಾದಾಗ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತನ್ನ ಕೆಲಸ ನಿರ್ವಹಿಸಲು ವಿಪತ್ತು ಪ್ರಾಧಿಕಾರ ವಿಫಲವಾದಂತೆ ಎಂದು ನ್ಯಾಯಾಲಯ ಹೇಳಿದೆ.

ಮರಣ ಪ್ರಮಾಣ ಪತ್ರಗಳಲ್ಲಿ ಸಾವಿನ ದಿನಾಂಕ ಮತ್ತು ಕಾರಣವನ್ನು (ಕೋವಿಡ್‌ನಿಂದ ಆದದ್ದು ಎಂದು) ನಮೂದಿಸಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ. ಕುಟುಂಬಸ್ಥರಿಗೆ ತೃಪ್ತಿ ಇಲ್ಲದಿದ್ದರೆ ಸಾವಿನ ಕಾರಣವನ್ನು ಸರಿಪಡಿಸುವ ಸೌಲಭ್ಯವೂ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

Also Read
ಕೋವಿಡ್ ಸಾವುಗಳಿಗೆ ಕೃಪಾನುದಾನ ನೀಡಿದರೆ ವಿಪತ್ತು ಪರಿಹಾರ ನಿಧಿಯ ಮೊತ್ತ ಖಾಲಿಯಾಗುತ್ತದೆ: ʼಸುಪ್ರೀಂʼಗೆ ಗೃಹ ಸಚಿವಾಲಯ

ಕೋವಿಡ್ ರೋಗದಿಂದ ಸಾವನ್ನಪ್ಪಿದವರು ಮತ್ತು ಮ್ಯುಕೊರ್‌ಮೈಕೋಸಿಸ್‌ ಸೇರಿದಂತೆ ಕೊರೊನೋತ್ತರ ಬಿಕ್ಕಟ್ಟಿನಿಂದ ತೊಂದರೆ ಅನುಭವಿಸಿದ ಕುಟುಂಬ ಸದಸ್ಯರಿಗೆ ರೂ 4 ಲಕ್ಷ ಕೃಪಾನುದಾನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ ಆರ್‌ ಶಾ ಅವರ ನೇತೃತ್ವದ ಪೀಠ ಈ ತೀರ್ಪು ನೀಡಿದೆ.

Kannada Bar & Bench
kannada.barandbench.com