ದೆಹಲಿಯಲ್ಲಿ ಹಳೆಯ ವಾಹನ ನಿಷೇಧಿಸದಂತೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಆದೇಶ

"ಹಿಂದೆ, 40-50 ವರ್ಷಗಳ ಕಾಲ ಕಾರುಗಳನ್ನು ಬಳಸುವವರಿದ್ದರು. ಈಗಲೂ ವಿಂಟೇಜ್ ಕಾರುಗಳಿವೆ..." ಎಂದು ಪೀಠ ಮೌಖಿಕವಾಗಿ ಹೇಳಿದೆ.
Supreme Court and Cars
Supreme Court and Cars
Published on

ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ [ಎಂಸಿ ಮೆಹ್ತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್  ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಈ ಆದೇಶ ನೀಡಿತು.

Also Read
ಹಳೆಯ ವಾಹನಗಳ ನಿಷೇಧ: ತೀರ್ಪು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೆಹಲಿ ಸರ್ಕಾರ

ನೋಟಿಸ್‌ಗೆ 4 ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ ನ್ಯಾಯಾಲಯ ಡೀಸೆಲ್ ವಾಹನಗಳಿಗೆ ಸಂಬಂಧಿಸಿದಂತೆ 10 ವರ್ಷ ಹಳೆಯದು ಮತ್ತು ಪೆಟ್ರೋಲ್ ವಾಹನಗಳಿಗೆ ಸಂಬಂಧಿಸಿದಂತೆ 15 ವರ್ಷ ಹಳೆಯದು ಎಂಬ ಕಾರಣಕ್ಕಾಗಿ ಕಾರುಗಳ ಮಾಲೀಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ತಾಕೀತು ಮಾಡಿತು.  ನಾಲ್ಕು ವಾರಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

"ಹಿಂದೆ, 40-50 ವರ್ಷಗಳ ಕಾಲ ಕಾರುಗಳನ್ನು ಬಳಸುವವರಿದ್ದರು. ಈಗಲೂ ವಿಂಟೇಜ್ ಕಾರುಗಳಿವೆ..." ಎಂದು ಪೀಠ ಮೌಖಿಕವಾಗಿ ಹೇಳಿದೆ.

ಮಾಲಿನ್ಯ ನಿಯಂತ್ರಣ ಕ್ರಮವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ 2018ರಲ್ಲಿ ನೀಡಿದ್ದ ಆದೇಶ ಮರುಪರಿಶೀಲಿಸುವಂತೆ ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಹಳೆಯ ವಾಹನ ನಿಷೇಧಿಸಿ 2018ರಲ್ಲಿ ನೀಡಲಾಗಿದ್ದ ಆದೇಶ ವೈಜ್ಞಾನಿಕ ವಿಶ್ಲೇಷಣೆಗಳನ್ನು ಆಧರಿಸಿಲ್ಲ. ತೀರ್ಪಿನಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ ಎಂದು ಎಂ ಸಿ ಮೆಹ್ತಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯಲ್ಲಿ ದೆಹಲಿ ಸರ್ಕಾರ ಗಮನ ಸೆಳೆದಿತ್ತು.

ಮಾಲಿನ್ಯ ನಿಯಂತ್ರಣದಲ್ಲಿ (ಪಿಯುಸಿ) ಪ್ರಮಾಣಪತ್ರ ಪಡೆಯುವ ವ್ಯಾಪ್ತಿ ಹಿಗ್ಗಿಸಿರುವುದು ಮತ್ತು ಭಾರತ್ ಸ್ಟೇಜ್‌-VI ಮಾನದಂಡಗಳ ಅನುಷ್ಠಾನದಂತಹ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಈಗ ಜಾರಿಯಲ್ಲಿವೆ. ನ್ಯಾಯಾಲಯ 2018ರಲ್ಲಿ ನೀಡಿದ ತೀರ್ಪಿನ ಬಳಿಕ 2020 ರಲ್ಲಿ ಬಿಎಸ್‌-VI ಮಾಲಿನ್ಯ ನಿಯಂತ್ರಣ ಮಾನದಂಡಗಳ ಪಾಲನೆ ಕಡ್ಡಾಯಗೊಳಿಸಲಾಯಿತು ಎಂದು ಅರ್ಜಿ ಹೇಳಿತ್ತು.

Also Read
ಸಂಚಾರ ಯೋಗ್ಯವಾಗಿದ್ದರೂ ಹಳೆಯ ವಾಹನ ಗುಜರಿಗೆ ಹಾಕುವ ನೀತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

"ಭಾರತ್ ಸ್ಟೇಜ್ VI ಎಂಜಿನ್‌ಗಳು ಗಮನಾರ್ಹವಾಗಿ ಕಡಿಮೆ ಮಾಲಿನ್ಯಕಾರಕವಾಗಿವೆ ... ಗೌರವಾನ್ವಿತ ನ್ಯಾಯಾಲಯದ 29.10.2018 ರಲ್ಲಿ ನೀಡಿದ್ದ ತೀರ್ಪು ಜಾರಿಯಲ್ಲಿದ್ದರೆ ಸಂಚಾರಕ್ಕೆ ಯೋಗ್ಯವಾದ, ಮಾಲಿನ್ಯರಹಿತ ಬಿ ಎಸ್‌-VI ವಾಹನಗಳು ಸಹ ಕೆಲವು ವರ್ಷಗಳಲ್ಲಿ ವೈಜ್ಞಾನಿಕ ಆಧಾರವಿಲ್ಲದೆ ರಸ್ತೆಗಿಳಿಯದಂತಾಗುತ್ತವೆ" ಎಂದು ಮನವಿ ವಿವರಿಸಿತ್ತು.

ದೆಹಲಿ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ , ನಿಷೇಧದಿಂದ ಉಂಟಾಗುವ ತೊಂದರೆಗಳನ್ನು ವಿವರಿಸಿದರು. ನಂತರ ನ್ಯಾಯಾಲಯ ಅವಧಿ ಮೀರಿದ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತು.

Kannada Bar & Bench
kannada.barandbench.com