ಕೋವಿಡ್‌ಗೆ ಬಲಿಯಾದವರ ಸಂಬಂಧಿಕರಿಗೆ ಪರಿಹಾರ ಪಾವತಿಸದಿರುವ ಸಂಬಂಧ ಆಂಧ್ರ ಪ್ರದೇಶ ಮತ್ತು ಬಿಹಾರದ ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಬುಧವಾರ ಸೂಚಿಸಿದೆ.
“ಅವರು ಕಾನೂನಿಗಿಂತ ಮಿಗಿಲಲ್ಲ. ಎರಡು ಗಂಟೆಗೆ ಹಾಜರಾಗುವಂತೆ ಹೇಳಿ” ಎಂದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತು.
ಕೋವಿಡ್ ರೋಗ ಮತ್ತು ಕೋವಿಡ್ ಸಂಕಷ್ಟಗಳಿಗೆ ಬಲಿಯಾದ ಕುಟುಂಬದ ಸದಸ್ಯರಿಗೆ ₹ 4 ಲಕ್ಷ ಪರಿಹಾರ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ಜಾರಿ ಮಾಡಿದೆ.
ಕೋವಿಡ್‌ಗೆ ಬಲಿಯಾದವರಿಗೆ ಪರಿಹಾರಧನ ಒದಗಿಸಲು ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಈ ಹಿಂದೆ ಸೂಚಿಸಿದ್ದ ನ್ಯಾಯಾಲಯ ಪರಿಹಾರದ ಮೊತ್ತ ಎಷ್ಟೆಂಬುದನ್ನು ನಿರ್ಧರಿಸುವ ವಿಚಾರ ಪ್ರಾಧಿಕಾರಕ್ಕೆ ಬಿಟ್ಟದ್ದು ಎಂದು ತಿಳಿಸಿತ್ತು. ಪ್ರಾಧಿಕಾರದ ಶಿಫಾರಸಿನಂತೆ ಕೋವಿಡ್‌ನಿಂದ ಬಲಿಯಾದ ಪ್ರತಿ ವ್ಯಕ್ತಿಗೆ ₹ 50,000 ಪರಿಹಾರಧನ ವಿತರಿಸಲಾಗುವುದು ಎಂಬ ಕೇಂದ್ರದ ವಾದವನ್ನು ಕಳೆದ ವರ್ಷ ಸುಪ್ರೀಂಕೋರ್ಟ್ ಮನ್ನಿಸಿತ್ತು.