ತಮಗೆ ಹಂಚಿಕೆಯಾದ ನಿವಾಸಗಳನ್ನು ಸುಪರ್ದಿಗೆ ನೀಡುವವರೆಗೆ ಪ್ರತಿ ತಿಂಗಳ ಕಂತಿನ ಹಣವನ್ನು (ಇಎಂಐ) ಪಾವತಿಸುವುದನ್ನು ಮುಂದೂಡುವಂತೆ ಕೋರಿದ್ದ ಮನೆ ಖರೀದಿದಾರರ ಕೋರಿಕೆಯನ್ನು ಮನ್ನಿಸಿ ಸುಪ್ರೀಂ ಕೋರ್ಟ್ ಈಚೆಗೆ ಅವರಿಗೆ ಮಧ್ಯಂತರ ರಕ್ಷಣೆ ಒದಗಿಸಿದೆ [ರೋಹಿತ್ ಕುಮಾರ್ ವರ್ಸ್ ಭಾರತ ಸರ್ಕಾರ ಮತ್ತು ಇತರರು].
ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮನೆ ಖರೀದಿರಾರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮನೆ ಖರೀದಿದಾರರ ವಿರುದ್ಧ ಬ್ಯಾಂಕ್ ಯಾವುದೇ ತೆರನಾದ ಕಠಿಣ ಕ್ರಮಕೈಗೊಳ್ಳಬಾರದು ಎಂದು ಪೀಠ ಹೇಳಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
“ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ಒದಗಿಸಲಾಗಿದ್ದ 25.05.2022ರಿಂದ ಆಕ್ಷೇಪಿತ ಆದೇಶ (ಹೈಕೋರ್ಟ್‌ನದ್ದು) ನೀಡುವವರೆಗೆ ಅರ್ಜಿದಾರರು ಮಧ್ಯಂತರ ರಕ್ಷಣೆಯ ಲಾಭ ಪಡೆದಿದ್ದು ಮುಂದಿನ ವಿಚಾರಣೆಯವರೆಗೂ ಅರ್ಜಿದಾರರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
2012ರ ನವೆಂಬರ್ 1ರಂದು ಮೇಲ್ಮನವಿದಾರರಾದ ಮನೆ ಖರೀದಿರಾರರು ಶುಭಕಾಮನಾ ಬಿಲ್ಡ್‌ಟೆಕ್ ಪ್ರೈವೇಟ್ ಲಿಮಿಟೆಡ್ ಜೊತೆ ಬಿಲ್ಡರ್-ಖರೀದಿದಾರರ ಒಪ್ಪಂದ ಮಾಡಿಕೊಂಡಿದ್ದರು. ಬಿಲ್ಡರ್-ಮನೆ ಖರೀದಿದಾರರು ಮತ್ತು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಒಳಗೊಂಡ ತ್ರಿಪಕ್ಷೀಯ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದ್ದು, ಇದು ಅನುದಾನಿತ ಯೋಜನೆಯ ರೂಪದಲ್ಲಿತ್ತು.
ಬಿಲ್ಡರ್ ನಿಗದಿತ ಕಾಲಾವಧಿಯಲ್ಲಿ ನಿರ್ಮಾಣ ಮಾಡಿದ ಮನೆಗಳನ್ನು ಖರೀದಿದಾರರಿಗೆ ಒದಗಿಸಲು ವಿಫಲರಾಗಿದ್ದು, ಅದೇ ರೀತಿ ಅಂತಹ ಸಂದರ್ಭಗಳಲ್ಲಿ ಮಾಸಿಕ ಕಂತು ಪಾವತಿ ಮಾಡುವ ಹೊಣಗಾರಿಕೆ ನಿಭಾಯಿಸಲು ಸಹ ಬಿಲ್ಡರ್ ವಿಫಲರಾಗಿದ್ದಾರೆ. ಈ ನಡುವೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಣಕಾಸಿನ ನೆರವು ನೀಡಿದ್ದ ಕಂಪೆನಿಯು ಸಾಲದ ಭಾಗವಾಗಿ ನೀಡಿದ್ದ ಮಾಸಿಕ ಕಂತನ್ನು ಮಸೂಲಿ ಮಾಡಲು ಮನೆ ಖರೀದಿದಾರರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿತ್ತು.
ಪ್ರಕರಣವು ಗುತ್ತಿಗೆ ಕರಾರಿನ ರೂಪದಲ್ಲಿ ಇರುವುದರಿಂದ ಮನೆ ಖರೀದಿದಾರರ ವಾದವನ್ನು ಒಪ್ಪಲಾಗದು ಎಂದು ದೆಹಲಿ ಹೈಕೋರ್ಟ್ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.