ಶಿಕ್ಷೆ ಅವಧಿ ಪೂರ್ಣಗೊಂಡರೂ ಜೈಲಿನಲ್ಲೇ ಇರುವ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿ ಸುಖದೇವ್ ಪೆಹಲ್ವಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
Supreme Court, Jail
Supreme Court, Jail
Published on

ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಇನ್ನೂ ಜೈಲಿನಲ್ಲಿ ಇರುವ ಎಲ್ಲ ಕೈದಿಗಳನ್ನು ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದೆ [ಸುಖದೇವ್ ಯಾದವ್ ಅಲಿಯಾಸ್‌ ಪೆಹಲ್ವಾನ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಶಿಕ್ಷೆ ಅವಧಿ ಮೀರಿ ಜೈಲಿನಲ್ಲಿರುವ ಅಪರಾಧಿಗಳ ಬಗ್ಗೆ ಪರಿಶೀಲನೆ ನಡೆಸಿ ಅಂತಹವರು ಇದ್ದರೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್‌ ಅವರಿದ್ದ ಪೀಠ ಜುಲೈ 29 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

"ಯಾವುದೇ ಆರೋಪಿ ಅಥವಾ ಅಪರಾಧಿ ಶಿಕ್ಷೆಯ ಅವಧಿಯನ್ನು ಮೀರಿ ಜೈಲಿನಲ್ಲಿ ಉಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಆದೇಶದ ಪ್ರತಿಯನ್ನು ನ್ಯಾಯಾಲಯದ ರಿಜಿಸ್ಟ್ರಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳಿಗೆ ವಿತರಿಸಬೇಕು. ಹಾಗೇನಾದರೂ ಅವರು ಇದ್ದಲ್ಲಿ ಬೇರೆ ಯಾವುದೇ ಪ್ರಕರಣಗಳಲ್ಲಿ ಅವರು ಅಗತ್ಯವಿಲ್ಲದಿದ್ದರೆ ಬಿಡುಗಡೆ ಮಾಡಲು ನಿರ್ದೇಶನ ನೀಡಿ" ಎಂದು ನ್ಯಾಯಾಲಯ ಆದೇಶಿಸಿತು.

ತೀರ್ಪನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವುದಕ್ಕಾಗಿ ರಾಷ್ಟ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಜಿಲ್ಲಾ ಮಟ್ಟಗಳಲ್ಲಿನ ಕಾನೂನು ಸೇವೆಗಳ ಅಧಿಕಾರಿಗಳಿಗೆ ತೀರ್ಪಿನ ಪ್ರತಿ ನೀಡುವಂತೆಯೂ ಅದು ನಿರ್ದೇಶಿಸಿದೆ.

ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿ ಸುಖದೇವ್ ಪೆಹಲ್ವಾನ್ ಸಲ್ಲಿಸಿದ್ದ ಅರ್ಜಿಯ  ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

2002ರಲ್ಲಿ ನಿತೀಶ್ ಕಟಾರಾ ಅವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರಕ್ಕಾಗಿ ಸುಪ್ರೀಂ ಕೋರ್ಟ್ ಮಾಜಿ ಸಂಪುಟ ಸಚಿವ ಡಿ ಪಿ ಯಾದವ್ ಅವರ ಪುತ್ರ ವಿಕಾಸ್ ಯಾದವ್ ಮತ್ತು ಅವರ ಸೋದರಸಂಬಂಧಿ ವಿಶಾಲ್ ಯಾದವ್ ಅವರಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಸಹ-ಅಪರಾಧಿಯಾಗಿದ್ದ ಸುಖದೇವ್ ಯಾದವ್‌ಗೆ 20 ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ಸುಖದೇವ್‌ 20 ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದರೂ ಅವರನ್ನು ಬಿಡುಗಡೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಿಸಲಾಗಿತ್ತು.

ಅವರ ಫರ್ಲೋ ಅರ್ಜಿ ಬಾಕಿ ಇದ್ದ ಕಾರಣ, ಮಾರ್ಚ್‌ನಲ್ಲಿ ಅವರನ್ನು ಬಿಡುಗಡೆ ಮಾಡಿರಲಿಲ್ಲ. (ಕೈದಿಗೆಯನ್ನು ತಾತ್ಕಾಲಿಕವಾಗಿ ಬಿಡುಗಡೆ  ಮಾಡುವುದಕ್ಕೆ ಫರ್ಲೋ ಎನ್ನುತ್ತಾರೆ. ಅದು ಸಂಪೂರ್ಣ ಶಿಕ್ಷೆಯ ಅಮಾನತು ಅಥವಾ ವಿನಾಯಿತಿ ಅಲ್ಲ. ಫೆರ್ಲೋವನ್ನು ಸಾಮಾನ್ಯವಾಗಿ ದೀರ್ಘಾವಧಿಯ ಜೈಲು ಶಿಕ್ಷೆಯ ಒಂದು ಭಾಗವನ್ನು ಅನುಭವಿಸಿದ ಕೈದಿಗಳಿಗೆ ನೀಡಲಾಗುತ್ತದೆ) ಜೂನ್ 25 ರಂದು ಅವರಿಗೆ ಫರ್ಲೋ ದೊರೆತು ಅಂದಿನಿಂದ ಆತ ಜೈಲಿನಿಂದ ಹೊರಗಿದ್ದ.

ಜುಲೈ 29 ರಂದು ನ್ಯಾಯಾಲಯವು ಅವರನ್ನು ಮಾರ್ಚ್ ತಿಂಗಳಿಂದಲೇ ಅನ್ವಯವಾಗುವಂತೆ ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ. ನ್ಯಾಯಾಲಯ ಈಗಾಗಲೇ ನೀಡಿರುವ ತೀರ್ಪನ್ನು ಶಿಕ್ಷೆ ಪರಿಶೀಲನಾ ಮಂಡಳಿ ಹಿಡಿದಿಟ್ಟುಕೊಳ್ಳುವಂತಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್‌ ಕಿವಿ ಹಿಂಡಿದೆ.

[ತೀರ್ಪಿನ ಪ್ರತಿ]

Attachment
PDF
Sukhdev_Yadav___Pehelwan_v__State_of_NCT_of_Delhi
Preview
Kannada Bar & Bench
kannada.barandbench.com