ವಿಕಲಚೇತನ ಸ್ನೇಹಿ ಸೌಲಭ್ಯಗಳ ಸೃಜನೆ: ಆರ್‌ಪಿಡಬ್ಲ್ಯುಡಿ ನಿಯಮಾವಳಿಗಳನ್ನು ಕಡ್ಡಾಯಗೊಳಿಸಲು ಸುಪ್ರೀಂ ನಿರ್ದೇಶನ

ಶಾಸನದ ಉದ್ದೇಶ ಮತ್ತು ಯೋಜನೆಗೆ ನಿಯಮ 15(1) ವಿರುದ್ಧವಾಗಿದೆ. ಕನಿಷ್ಠ ಲಭ್ಯತೆಯ ಸವಲತ್ತುಗಳ ಸೃಷ್ಟಿಯನ್ನು 'ಪ್ರಗತಿಶೀಲ ಪರಿವರ್ತನೆ'ಯ ಪರಿಧಿಗೆ ಬಿಡಲಾಗದು ಎಂದು ಹೇಳಿದ ನ್ಯಾಯಾಲಯ.
RPWD
RPWD
Published on

ವಿಕಲಚೇತನರ ಹಕ್ಕುಗಳ (ಆರ್‌ಪಿಡಬ್ಲ್ಯೂಡಿ) ಕಾಯಿದೆ ಮತ್ತು ವಿಕಲಚೇತನರ ಹಕ್ಕುಗಳ ನಿಯಮಾವಳಿ, 2017 ಈ ಎರಡರ ಕಾನೂನು ಚೌಕಟ್ಟಿನಲ್ಲಿ ಇರುವ ಅಸಂಗತೆಗಳನ್ನು ಪರಿಹರಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ರಾಜೀವ್ ರತುರಿ ವರ್ಸಸ್ ಭಾರತ ಸರ್ಕಾರ ಮತ್ತು ಇತರರು].

ಸಿಜೆಐ ಡಿ ವೈ ಚಂದ್ರ ಚೂಡ್‌ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕಾನೂನು ಅಧ್ಯಯನ ಮತ್ತು ಸಂಶೋಧನಾ ರಾಷ್ಟ್ರೀಯ ಅಕಾಡೆಮಿಯ (ನಲ್ಸಾರ್‌) ವೈಕಲ್ಯ ಅಧ್ಯಯನ ಕೇಂದ್ರವು ವಿಕಲಚೇತನ ಸ್ನೇಹಿ ಸೌಲಭ್ಯ, ಸವಲತ್ತುಗಳ ನಿರ್ಮಾಣದಲ್ಲಿ ಇರುವ ಕೊರತೆಗಳ ಬಗ್ಗೆ ಸಲ್ಲಿಸಿರುವ ಅಧ್ಯಯನ ವರದಿಯ ಹಿನ್ನೆಲೆಯಲ್ಲಿ ಮೇಲಿನ ನಿರ್ದೇಶನ ನೀಡಿದೆ.

ಮಾನವ ಹಕ್ಕುಗಳ ಹೋರಾಟಗಾರರಾದ ದೃಷ್ಟಿ ದೋಷವುಳ್ಳ ರಾಜೀವ್ ರತೂರಿ ಅವರು ಸಲ್ಲಿಸಿರುವ ಪಿಐಎಲ್‌ ವಿಚಾರಣೆಯ ವೇಳೆ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ

ಆರ್‌ಪಿಡಬ್ಲ್ಯೂಡಿ ಕಾಯಿದೆಯು ವಿಕಲಚೇತನರಿಗೆ ಸುಲಭಲಭ್ಯವಾಗುವಂತಹ, ಕಡ್ಡಾಯವಾಗಿ ಅನುಪಾಲನೆ ಮಾಡಬೇಕಾದ ರಾಜಿ ರಹಿತವಾದ ನಿಯಮಾವಳಿಗಳ ರಚನೆಗೆ ಅಗತ್ಯವಾದ ಕಾರ್ಯವಿಧಾನ ಸೃಷ್ಟಿಸುತ್ತದೆ. ಆದರೆ, 2017 ರ ಆರ್‌ಪಿಡಬ್ಲ್ಯೂಡಿ ನಿಯಮಗಳು ಕಡ್ಡಾಯವಲ್ಲದ ಸ್ವಯಂ-ನಿಯಂತ್ರಕ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸುವ ಕಾರ್ಯವಿಧಾನವನ್ನು ರೂಪಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ, "ನಿಯಮ 15ರ ಅಡಿ ರೂಪಿಸಲಾಗಿರುವ ಮಾರ್ಗಸೂಚಿಗಳು ಕಡ್ಡಾಯ ನಿಯಮಾವಳಿಗಳ ಮುಸುಕಿನಲ್ಲಿರುವ ಶಿಫಾರಸ್ಸು ಮಾರ್ಗಸೂಚಿಗಳಾಗಿ ಮಾತ್ರವೇ ಕಾಣಿಸುತ್ತವೆ. ಶಾಸನದ ಉದ್ದೇಶ ಮತ್ತು ಯೋಜನೆಗೆ ನಿಯಮ 15(1) ವಿರುದ್ಧವಾಗಿದೆ. ಕನಿಷ್ಠ ಲಭ್ಯತೆಯ ಸವಲತ್ತುಗಳ ಸೃಷ್ಟಿಸುವುದನ್ನು 'ಪ್ರಗತಿಶೀಲ ಪರಿವರ್ತನೆ'ಯ ಪರಿಧಿಗೆ ಬಿಡಲಾಗದು" ಎಂದು ತನ್ನ ಆದೇಶದಲ್ಲಿ ಹೇಳಿದೆ.

ಮುಂದುವರಿದು, "ನಿಯಮ 15 ಒಂದು ಮಹತ್ವಾಕಾಂಕ್ಷೆಯ ಛಾವಣಿಯನ್ನು ಮಾತ್ರವೇ ನಿರ್ಮಿಸುತ್ತದೆ. ಆರ್‌ಪಿಡಬ್ಲ್ಯುಡಿ ಕಾಯಿದೆಗೆ ತನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಅರ್ಥಾತ್ ರಾಜಿರಹಿತವಾದ ವೇದಿಕೆಯನ್ನು ನಿರ್ಮಿಸಲು ತಾನು ಸೂಚಿಸಿರುವ ಮಾರ್ಗಸೂಚಿಗಳಿಂದ ಸಾಧ್ಯವಿಲ್ಲವಾಗಿದೆ. ತಳಪಾಯವಿಲ್ಲದ ಛಾವಣಿ ಸುಭದ್ರವಾಗಿರುವುದಿಲ್ಲ," ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಅಂತಿಮವಾಗಿ ನ್ಯಾಯಾಲಯವು, ಮೂರು ತಿಂಗಳ ಅವಧಿಯೊಳಗೆ ಸೆಕ್ಷನ್ 40ರ ಅನ್ವಯ ಅಗತ್ಯವಿರುವ ಕಡ್ಡಾಯ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.

Kannada Bar & Bench
kannada.barandbench.com