ಹೊಸ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯುವವರೆಗೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ವ್ಯವಹಾರಗಳನ್ನು ನಿರ್ವಹಿಸಲು ಆಡಳಿತಗಾರರ ಸಮಿತಿ (ಸಿಒಎ) ನೇಮಿಸಿದ್ದ ದೆಹಲಿ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಸದ್ಯಕ್ಕೆ ಐಒಎ ಉಸ್ತುವಾರಿಯನ್ನು ಸಿಒಎಗೆ ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಆದೇಶಿಸಿದೆ.
“ದೆಹಲಿ ಹೈಕೋರ್ಟ್ ನೇಮಿಸಿರುವ ಸಿಒಎಗೆ ಕಾರ್ಯಭಾರ ನೀಡಲಾಗದು” ಎಂದಿರುವ ಪೀಠ ಸೋಮವಾರಕ್ಕೆ ಪ್ರಕರಣವನ್ನು ಪಟ್ಟಿ ಮಾಡುವಂತೆ ಸೂಚಿಸಿದೆ. ಇದಕ್ಕೂ ಮುನ್ನ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಐಒಎ ಉಸ್ತುವಾರಿಯನ್ನು ಸಿಒಎಗೆ ವಹಿಸುವುದನ್ನು ಕ್ರೀಡಾ ಸಂಸ್ಥೆಯು ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದು ಪರಿಗಣಿಸಲಿದೆ ಎಂಬುದಾಗಿ ತಿಳಿಸಿದರು.
"ಇದೊಂದು ಪ್ರಮುಖ ರಾಷ್ಟ್ರೀಯ ವಿಷಯವಾಗಿದೆ. ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತರರಾಷ್ಟ್ರೀಯ ಸಂಸ್ಥೆಯ ಘಟಕವಾಗಿದೆ. ಆ ಸಂಸ್ಥೆಯ ನಿಯಮಗಳ ಪ್ರಕಾರ ಚುನಾಯಿತವಲ್ಲದ ಸಂಸ್ಥೆ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಪ್ರತಿನಿಧಿಸಿದರೆ, ಅದನ್ನು ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದು ಪರಿಗಣಿಸಲಾಗುತ್ತದೆ. ಆ ಸಂಸ್ಥೆಯ ನಿಯಮಗಳಿಗೆ ಐಒಎ ಬದ್ಧರಾಗಿರಬೇಕಾಗುತ್ತದೆ ”ಎಂದು ಎಸ್‌ಜಿ ಹೇಳಿದರು.
ಸಿಒಎ ಅಧಿಕಾರ ವಹಿಸಿಕೊಂಡರೆ ಭಾರತವನ್ನು ಯಾವುದೇ ಒಲಿಂಪಿಕ್ ಕ್ರೀಡಾಕೂಟದಿಂದ ಅಮಾನತುಗೊಳಿಸುವ ಸಾಧ್ಯತೆ ಶೇ 90ರಷ್ಟು ಇರುತ್ತದೆ ಎಂದು ಅವರು ಹೇಳಿದರು.
ಹೈಕೋರ್ಟಿನ ಆದೇಶದಿಂದಾಗಿ ಒಲಿಂಪಿಕ್ಸ್ ಮತ್ತು ಎಲ್ಲಾ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಯಥಾಸ್ಥಿತಿಗೆ ಆದೇಶಿಸಲು ನಿರ್ಧರಿಸಿತು.,
ದೆಹಲಿ ಹೈಕೋರ್ಟ್ ಕಳೆದ ಆಗಸ್ಟ್ 16ರಂದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅನಿಲ್ ಆರ್ ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ ಎಸ್ ವೈ ಖುರೇಷಿ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಅವರನ್ನು ಒಳಗೊಂಡ ಸಿಒಎಯನ್ನು ನೇಮಿಸಿತ್ತು.