ಭೂಷಣ್‌ ಪವರ್‌ ಸಂಸ್ಥೆ ಮುಚ್ಚುವ ಆದೇಶ: ಸುಪ್ರೀಂ ತೀರ್ಪಿನ ವಿರುದ್ಧ ಜೆಎಸ್‌ಡಬ್ಲ್ಯೂ ಮರುಪರಿಶೀಲನಾ ಕೋರಿಕೆ

ಮರುಪರಿಶೀಲನಾ ಅರ್ಜಿಯಲ್ಲಿ, ಮೇ 2ರ ಸುಪ್ರೀಂ ತೀರ್ಪು ನಿರ್ಣಾಯಕ ಸಂಗತಿಗಳು ಮತ್ತು ದಾಖಲೆಗಳಲ್ಲಿ ಅಧಿಕೃತವಾಗಿ ಕಂಡುಬರುವ ಕಾನೂನು ದೋಷಗಳನ್ನು ಕಡೆಗಣಿಸಿದೆ ಎನ್ನಲಾಗಿದೆ.
JSW
JSW
Published on

ಸಾಲದ ಸುಳಿಗೆ ಸಿಲುಕಿರುವ ಭೂಷಣ್ ಪವರ್ ಅಂಡ್ ಸ್ಟೀಲ್ (ಬಿಪಿಎಸ್‌ಎಲ್‌ ) ಸಂಸ್ಥೆಯ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾನು ಸಲ್ಲಿಸಿರುವ ಪರಿಹಾರೋಪಾಯ ಯೋಜನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಭೂಷಣ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಜೆಎಸ್‌ಡಬ್ಲ್ಯೂ ಸ್ಟೀಲ್‌ ಸಲ್ಲಿಸಿದ್ದ ಪರಿಹಾರೋಪಾಯ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಮೇ 2ರಂದು ರದ್ದುಗೊಳಿಸಿ, ಇದು ಕಾನೂನುಬಾಹಿರವಾಗಿದ್ದು, ದಿವಾಳಿ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿತ್ತು. ಅಲ್ಲದೆ, ಸಂಸ್ಥೆಯನ್ನು ಋಣವಿಮೋಚನಾ ಪರಿಸಮಾಪ್ತಿಗೊಳಿಸಲು (ಲಿಕ್ವಿಡೇಷನ್‌ - ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಮುಚ್ಚಿ ಅದರ ಆಸ್ತಿಪಾಸ್ತಿಗಳನ್ನು ಮಾರುವ ಮೂಲಕ ಸಾಲದಾತರ ಋಣವಿಮೋಚನೆಗೆ ಪ್ರಯತ್ನಿಸುವುದು) ಸೂಚಿಸಿತ್ತು.

ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಐಬಿಸಿ ಅಡಿಯಲ್ಲಿ ಬಿಎಸ್‌ಪಿಎಲ್‌ ಅನ್ನು ಋಣವಿಮೋಚನಾ ಪರಿಸಮಾಪ್ತಿಗೊಳಿಸುವ ಪ್ರಕ್ರಿಯೆಗೊಳಪಡಿಸಲು (ಲಿಕ್ವಿಡೇಷನ್‌) ಆದೇಶಿಸಿತ್ತು.

ಜೆಎಸ್‌ಡಬ್ಲ್ಯೂ ಸಲ್ಲಿಸಿರುವ ಮರುಪರಿಶೀಲನನಾ ಅರ್ಜಿಯ ಪ್ರಕಾರ ಮೇ 2ರ ತೀರ್ಪು ನಿರ್ಣಾಯಕ ಸಂಗತಿಗಳು ಮತ್ತು ದಾಖಲೆಗಳಲ್ಲಿ ಅಧಿಕೃತವಾಗಿ ಕಂಡುಬರುವ ಕಾನೂನು ದೋಷಗಳನ್ನು ಕಡೆಗಣಿಸಿದೆ. ಈ ನಿರ್ಧಾರವು ಸಾಲಗಾರರ ವಾಣಿಜ್ಯ ಬುದ್ಧಿವಂತಿಕೆಯನ್ನು ಮತ್ತು ʼದಿವಾಳಿ ಹಾಗೂ ದಿವಾಳಿತನ ಸಂಹಿತೆʼಯ ಉದ್ದೇಶಗಳನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯು ವಾದಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪು ವಾಸ್ತವಾಂಶಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಆ ಮೂಲಕ ಕಾನೂನಿನ ಪೂರ್ವನಿದರ್ಶನಕ್ಕೆ ವಿರುದ್ಧವಾದ ಶೋಧನೆಗಳಿಗೆ ಕಾರಣವಾಗಿದೆ ಎಂದು ಅರ್ಜಿಯು ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2ರಂದು ನೀಡಿದ್ದ ತನ್ನ ಕಟುವಾದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್, ಬಿಪಿಎಸ್‌ಎಲ್‌ಗಾಗಿ ಜಎಸ್‌ಡಬ್ಲ್ಯೂ ಸ್ಟೀಲ್‌ ಪ್ರಸ್ತಾಪಿಸಿರುವ ₹19,700 ಕೋಟಿ ಪರಿಹಾರೋಪಾಯ ಯೋಜನೆಯನ್ನು ರದ್ದುಗೊಳಿಸಿತ್ತು. ಅಲ್ಲದೆ ಪರಿಹಾರೋಪಾಯ ಯೋಜನೆಯು, "ಐಬಿಸಿಯ ಕಡ್ಡಾಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ" ಮತ್ತು ಜೆಎಸ್‌ಡಬ್ಲ್ಯೂ ಮಾಡಿರುವ ಅಪ್ರಾಮಾಣಿಕ ಮತ್ತು ಮೋಸದ ಪ್ರಯತ್ನ ಎಂದು ಜೆಎಸ್‌ಡಬ್ಲ್ಯೂ ಸ್ಟೀಲ್‌ನ ನಡವಳಿಕೆಯನ್ನು ಟೀಕಿಸಿತ್ತು.

ಮುಂದುವರಿದು, ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕಂಪನಿಯು "ಬುದ್ಧಿವಂತಿಕೆಯಿಂದ ವರ್ತಿಸಿದೆ" ಮತ್ತು ದಿವಾಳಿತನ ಪ್ರಕ್ರಿಯೆಯ ಉದ್ದಕ್ಕೂ ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ ಉದ್ದೇಶವನ್ನು ಪ್ರದರ್ಶಿಸಿದೆ ಎಂದು ಹೇಳಿತ್ತು.

ನಂತರ ಮೇ 26 ರಂದು ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಬಾಕಿ ಇರುವ ಬಿಪಿಎಸ್‌ಎಲ್‌ಗೆ ಸಂಬಂಧಿಸಿದ ದಿವಾಳಿ ಪ್ರಕ್ರಿಯೆಗಳ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.

ನ್ಯಾಯಮೂರ್ತಿಗಳಾದ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಮೇ 2 ರ ನ್ಯಾಯಾಲಯದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಜೆಎಸ್‌ಡಬ್ಲ್ಯೂಗೆ ಅವಕಾಶ ನೀಡುವಂತೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com