
ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ನಾಲ್ವರು ನಿಕಟ ಕುಟುಂಬ ಸದಸ್ಯರಿಗೆ ದೇಶದ ಜೊತೆಗೆ ವಿದೇಶದಲ್ಲೂ ಝಡ್ ಪ್ಲಸ್ ಭದ್ರತೆ ಒದಗಿಸಬೇಕು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಭದ್ರತೆ ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮಹಾರಾಷ್ಟ್ರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ [ಭಾರತ ಒಕ್ಕೂಟ ಮತ್ತು ಬಿಕಾಶ್ ಸಹಾ ಇನ್ನಿತರರ ನಡುವಣ ಪ್ರಕರಣ].
ಬೆದರಿಕೆ ಇದ್ದ ಸಂದರ್ಭದಲ್ಲಿ, ಅದರಲ್ಲಿಯೂ ಕುಟುಂಬವೇ ಭದ್ರತಾ ವೆಚ್ಚ ಭರಿಸುತ್ತಿರುವಾಗ ಅವರಿಗೆ ಒದಗಿಸಲಾಗುತ್ತಿರುವ ರಕ್ಷಣೆಯನ್ನು ಅವರು ವಾಸಿಸುವ ರಾಜ್ಯಕ್ಕೆ (ಮಹಾರಾಷ್ಟ್ರ) ಮಾತ್ರವೇ ನಿರ್ಬಂಧಿಸಲಾಗದು. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರ ದೇಶದೊಳಗಿನ ಮತ್ತು ದೇಶದಾಚೆಗಿನ ವ್ಯಾಪಾರ ಚಟುವಟಿಕೆ ಗಮನಿಸಿದರೆ ನಿರ್ದಿಷ್ಟ ಸ್ಥಳ ಅಥವಾ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿ ಅವರಿಗೆ ಭದ್ರತೆ ನಿರ್ಬಂಧಿಸುವುದರಿಂದ ರಕ್ಷಣೆ ಒದಗಿಸುವ ಉದ್ದೇಶಕ್ಕೇ ತಣ್ಣೀರೆರಚಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಹೇಳಿದೆ.
ಹಾಗಾಗಿ, ಅಂಬಾನಿ ಮತ್ತವರ ಕುಟುಂಬದ ವ್ಯಾಪಾರ ಚಟುವಟಿಕೆಗಳು ದೇಶದೊಳಗೆ ಹಾಗೂ ಹೊರಗೆ ವ್ಯಾಪಿಸಿವೆ. ಇದರಿಂದಾಗಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಕೇವಲ ನಿರ್ದಿಷ್ಟ ಸ್ಥಳ ಅಥವಾ ಪ್ರದೇಶಕ್ಕೆ ಮಾತ್ರವೇ ಸೀಮಿತಗೊಳಿಸಿದರೆ ಭದ್ರತೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮುಂದುವರೆದು, ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರಿಗೆ ಭಾರೀ ಭದ್ರತೆ ಒದಗಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ವೆಚ್ಚವನ್ನು ಅಂಬಾನಿ ಕುಟುಂಬವೇ ಭರಿಸಬೇಕು ಎಂದು ಕೋರ್ಟ್ ಸೂಚಿಸಿತು.
ಅಂಬಾನಿ ಕುಟುಂಬದ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ನೀಡಿರುವ ಸೂಚನೆಗಳು ಹೀಗಿವೆ:
(i) ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಒದಗಿಸಲಾಗಿರುವ ಜಡ್ ಪ್ಲಸ್ ಭದ್ರತೆ ದೇಶದಾದ್ಯಂತ ಇದೆಯೇ ಎಂಬುದನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿಕೊಳ್ಳಬೇಕು.
(ii) ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರು ವಿದೇಶದಲ್ಲಿ ಪ್ರಯಾಣಿಸುವಾಗ ಭಾರತ ಸರ್ಕಾರದ ನೀತಿಯ ಪ್ರಕಾರ ಒದಗಿಸಲಾಗುವ ಅತ್ಯುನ್ನತ ಮಟ್ಟದ ಜಡ್ ಪ್ಲಸ್ ಭದ್ರತೆಯನ್ನು ಸಹ ಒದಗಿಸಬೇಕು. ಇದನ್ನು ಕೂಡ ಗೃಹ ವ್ಯವಹಾರಗಳ ಸಚಿವಾಲಯ ಖಾತ್ರಿಪಡಿಸಿಕೊಳ್ಳಬೇಕು.
(iii) ಭಾರತದೊಳಗೆ ಮತ್ತು ವಿದೇಶದಲ್ಲಿ ಇಡಿಯಾಗಿ ಒದಗಿಸಲಾಗುವ ಝಡ್ ಪ್ಲಸ್ ಭದ್ರತೆಯ ವೆಚ್ಚವನ್ನು ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಅವರು ಒದಗಿಸಬೇಕು.
ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ವೇಳೆ ಈ ಆದೇಶ ನೀಡಲಾಗಿದೆ. ಕುಟುಂಬಕ್ಕೆ ಒದಗಿಸಿರುವ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ಜುಲೈ 2022ರಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: