ಮಧ್ಯಸ್ಥಿಕೆದಾರರ ನೇಮಕಾತಿ ಅರ್ಜಿಗಳಿಗೆ ಕಾಲಮಿತಿ: ಸಂಸತ್ತಿಗೆ ಸುಪ್ರೀಂ ಕೋರ್ಟ್ ಒತ್ತಾಯ
ಆದಮಧ್ಯಸ್ಥಿಕೆದಾರರನ್ನು ನೇಮಕ ಮಾಡಲು ಅರ್ಜಿಗಳನ್ನು ಸಲ್ಲಿಸುವ ಕಾಲಮಿತಿಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯಲ್ಲಿನ ಶಾಸನಾತ್ಮಕ ನಿರ್ವಾತವನ್ನು ತೊಡೆದುಹಾಕುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸಂಸತ್ತನ್ನು ಒತ್ತಾಯಿಸಿದೆ.
ಅಂತಹ ಮನವಿಗಳಿಗೆ ಯಾವುದೇ ಶಾಸನಬದ್ಧ ಮಿತಿಯಿಲ್ಲ ಮತ್ತು ಅಸ್ತಿತ್ವದಲ್ಲಿರುವ ಮೂರು ವರ್ಷಗಳ ನಿಯಮ ಅನಗತ್ಯವಾಗಿ ದೀರ್ಘವಾಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
"ಕಾಲಮಿತಿಯ ಬಗ್ಗೆ ಯಾವುದೇ ಶಾಸನಬದ್ಧ ಸೂಚನೆ ಇಲ್ಲ. 996ರ ಕಾಯಿದೆಯ ಸೆಕ್ಷನ್ 11ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮೂರು ವರ್ಷಗಳ ಅವಧಿ ಅನಗತ್ಯವಾಗಿ ದೀರ್ಘವಾದುದಾಗಿದ್ದು ವಾಣಿಜ್ಯ ವಿವಾದಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ಪರಿಹರಿಸಲು ಅವಕಾಶ ನೀಡುವ 1996ರ ಕಾಯಿದೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ನಾವು ಮತ್ತೊಮ್ಮೆ ಹೇಳಲು ಬಯಸುತ್ತೇವೆ... ನಿರ್ದಿಷ್ಟ ಮಿತಿಯನ್ನು ಸೂಚಿಸುವ ತಿದ್ದುಪಡಿ ತರುವುದನ್ನು ಸಂಸತ್ತು ಪರಿಗಣಿಸಬೇಕು" ಎಂದು ಅದು ವಿವರಿಸಿದೆ.
1996ರ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 11 (6)ರ ಅಡಿಯಲ್ಲಿ ಅರ್ಜಿಯನ್ನು ವಿಲೇವಾರಿ ಮಾಡುವಾಗ ಈ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕಂಪ್ಯೂಟರ್ ಶಿಕ್ಷಣ ಮತ್ತು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ವ್ಯವಹಾರದಲ್ಲಿ ತೊಡಗಿರುವಅಫ್ಘಾನಿಸ್ತಾನದ ಕಾಬೂಲ್ ಮೂಲದ ಆರಿಫ್ ಅಜೀಮ್ ಕಂಪನಿ ಈ ಅರ್ಜಿ ಸಲ್ಲಿಸಿತ್ತು.
ಭಾರತೀಯ ಕಂಪನಿ ಆಪ್ಟೆಕ್ ಲಿಮಿಟೆಡ್ ಜೊತೆ 2013ರಲ್ಲಿ ಮಾಡಿಕೊಂಡಿದ್ದ ಒಪ್ಪಂದ ಕುರಿತ ವಿವಾದಗಳು ಮತ್ತು ಪರಿಹಾರ ನಿರ್ಣಯಿಸಲು ಮಧ್ಯಸ್ಥಿಕೆದಾರರನ್ನು ನೇಮಿಸಲು ಕಂಪನಿ ಕೋರಿತ್ತು.
ಬಾಂಬೆ ಹೈಕೋರ್ಟ್‌ನಲ್ಲಿ ಈ ಹಿಂದೆ ಹೂಡಲಾಗಿದ್ದ ಮೊಕದ್ದಮೆಯಲ್ಲಿ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಎರಡೂ ಕಂಪೆನಿಗಳು ನಿರ್ಧರಿಸಿದ್ದವು. ಆದರೆ ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ಕಂಪೆನಿ 82,13,367 ರೂ.ಗಳ ಬಡ್ಡಿ ಸೇರಿದಂತೆ 1,48,31,067 ರೂ.ಗಳ ಬಾಕಿ ಪಾವತಿಸುವಂತೆ ಕೇಳಿತು. ಹಿರಿಯ ವಕೀಲರಾದ ವಿ ಗಿರಿ ಮತ್ತು ಎಂಎಲ್ ವರ್ಮಾ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನಾಮನಿರ್ದೇಶನ ಮಾಡಿತು.
ಆದರೆ ಭಾರತೀಯ ಕಂಪೆನಿ ಈ ವಾದಗಳನ್ನು ನಿರಾಕರಿಸಿ ಕಾಲಮಿತಿಯ ಆಧಾರದಲ್ಲಿ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತು. ಹೀಗಾಗಿ ಆಫ್ಘಾನಿಸ್ತಾನ ಕಂಪೆನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಮಧ್ಯಸ್ಥಿಕೆ ಕೋರುವ ಮೊದಲ ಸೂಚನೆ ಪಾಲಿಸಲು ಪ್ರತಿವಾದಿ (ಭಾರತೀಯ ಕಂಪೆನಿ) ವಿಫಲವಾದ ಮೂರು ವರ್ಷಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಂತಿಮವಾಗಿ ಅಭಿಪ್ರಾಯಪಟ್ಟಿತು.
"ಅರ್ಜಿದಾರರು ಕ್ರಮದ ಕಾರಣವನ್ನು ಪಡೆದ ದಿನಾಂಕದಿಂದ ಮೂರು ವರ್ಷಗಳ ಅವಧಿಯಲ್ಲಿ ಮಧ್ಯಸ್ಥಿಕೆಯನ್ನು ಹಿಂತೆಗೆದುಕೊಳ್ಳುವ ನೋಟಿಸ್ ನೀಡಿರುವುದರಿಂದ, ಮಧ್ಯಸ್ಥಿಕೆ ಪ್ರಕ್ರಿಯೆಗಳು ಪ್ರಾರಂಭವಾದ ದಿನಾಂಕದಂದು ಹಕ್ಕುಗಳು ಮೇಲ್ನೋಟಕ್ಕೆ ನಿಷ್ಕ್ರಿಯವಾಗಿವೆ ಅಥವಾ ಸಮಯ ನಿರ್ಬಂಧಿಸಲಾಗಿದೆ ಎಂದು ಹೇಳಲಾಗದು" ಎಂಬುದಾಗಿ ಅದು ತಿಳಿಸಿತು.
ಲಿಮಿಟೇಷನ್ ಕಾಯಿದೆಯ ಸೆಕ್ಷನ್ 137 ರ ಪ್ರಕಾರ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಮೂರು ವರ್ಷಗಳ ಕಾಲಮಿತಿ ನಿಯಮಗಳ ಪ್ರಕಾರವಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.
ಆದ್ದರಿಂದ, ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಏಕೈಕ ಮಧ್ಯಸ್ಥಗಾರರಾಗಿ ನೇಮಿಸಲು ಅದು ಮುಂದಾಯಿತು. ಅದಕ್ಕಾಗಿ ಅವರ ಶುಲ್ಕವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಪಕ್ಷಕಾರರಿಗೆ ನೀಡಲಾಯಿತು.
ಆರಿಫ್ ಅಜೀಂ ಕಂಪನಿಯ ಪರವಾಗಿ ವಕೀಲ ಆರ್.ಸತೀಶ್ ಮತ್ತು ಆಪ್ಟೆಕ್ ಲಿಮಿಟೆಡ್ ಪರವಾಗಿ ಹಿರಿಯ ವಕೀಲ ರಾಣಾ ಮುಖರ್ಜಿ ಹಾಜರಾಗಿದ್ದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]