ಜ್ಞಾನವಾಪಿ ಮಸೀದಿ ಸಮೀಕ್ಷೆ: ಎಎಸ್‌ಐಗೆ ಅನುಮತಿಸಿದ ಸುಪ್ರೀಂ; ಮಧ್ಯಪ್ರವೇಶಿಸಲು ನಕಾರ

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಮುಸ್ಲಿಂ ಪಕ್ಷಕಾರರ ಪರ ವಕೀಲರಿಗೆ, “ನಿಮಗೆ ಕ್ಷುಲ್ಲಕವಾಗಿರುವುದು ಮತ್ತೊಂದು ಬದಿಯಲ್ಲಿರುವವರಿಗೆ ನಂಬಿಕೆಯಾಗಿರುತ್ತದೆ” ಎಂದಿತು.
Supreme Court (left) and Gyanvapi Mosque (right)
Supreme Court (left) and Gyanvapi Mosque (right)
Published on

ಜ್ಞಾನವಾಪಿ ಮಸೀದಿ ವ್ಯಾಪ್ತಿಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಅನುಮತಿಸಿರುವ ಅಲಾಹಾಬಾದ್‌ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಸಮೀಕ್ಷೆ ಪ್ರಶ್ನಿಸಿ ಮುಸ್ಲಿಮ್‌ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಜಾ ಮಾಡಿದೆ. ಸಮೀಕ್ಷೆಗೆ ಆದೇಶಿಸಿರುವ ಹೈಕೋರ್ಟ್‌ನ ಆದೇಶದಲ್ಲಿ ಈ ಹಂತದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಾಣುತ್ತಿಲ್ಲ. ಇಂಥ ಸಮೀಕ್ಷೆಯನ್ನು ಅಯೋಧ್ಯಾ ಪ್ರಕರಣದಲ್ಲೂ ನಡೆಸಲಾಗಿತ್ತು ಎಂದು ಪೀಠ ಹೇಳಿದೆ.

“ವೈಜ್ಞಾನಿಕ ಸಮೀಕ್ಷೆ ನಡೆಸಲು ಎಎಸ್‌ಐಗೆ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಮಧ್ಯಂತರ ಅರ್ಜಿ ವಿಚಾರಣೆ ನಡೆಸಿ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಹೈಕೋರ್ಟ್‌ ಕೆಲವು ರಕ್ಷಣಾ ಕ್ರಮಗಳನ್ನು ಸೂಚಿಸಿದೆ. ನ್ಯಾಯಾಲಯ ನೇಮಿಸಿರುವ ಆಯೋಗದ ವ್ಯಾಪ್ತಿಗೆ ಸಂಬಂಧಿಸಿದಂತೆ ಭಿನ್ನ ನಿಲುವು ತಳೆಯಲಾಗದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಜಿಲ್ಲಾ ನ್ಯಾಯಾಧೀಶರ ಆದೇಶಕ್ಕೆ ಪೂರಕವಾಗಿ ಕೆಲವು ನಿರ್ದೇಶನಗಳನ್ನು ಹೈಕೋರ್ಟ್‌ ನೀಡಿರುವುದು ಸಮಂಜಸವಾಗಿದೆ. ಯಾವುದೇ ಉತ್ಖನನ ಅಥವಾ ಆಸ್ತಿಗೆ ಹಾನಿ ಮಾಡುವುದಿಲ್ಲ ಎಂದು ಎಎಸ್‌ಐ ಸ್ಪಷ್ಟಪಡಿಸಿದೆ” ಎಂದು ಪೀಠ ಹೇಳಿದೆ.

Also Read
ಜ್ಞಾನವಾಪಿ ಪ್ರಕರಣ: ಎಎಸ್ಐ ಸಮೀಕ್ಷೆಗೆ ಅನುಮತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಮುಸ್ಲಿಂ ಪಕ್ಷಕಾರರು

“ಧಕ್ಕೆಯೊದಗದಂತಹ ವಿಧಾನವನ್ನು ಎಎಸ್‌ಐ ಅಳವಡಿಸಿಕೊಂಡು ಇಡೀ ಸಮೀಕ್ಷೆ ಪೂರ್ಣಗೊಳಿಸಬೇಕು. ಸ್ಥಳದಲ್ಲಿ ಯಾವುದೇ ಉತ್ಖನನ ನಡೆಸುವಂತಿಲ್ಲ ಎಂಬ ಹೈಕೋರ್ಟ್‌ ಆದೇಶವನ್ನು ಪುನರುಚ್ಚರಿಸುತ್ತಿದ್ದೇವೆ. ಎಎಸ್‌ಐ ಸಮೀಕ್ಷಾ ವದರಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು. ಅದನ್ನು ದಾವೆಯ ವಿಚಾರಣೆಯಲ್ಲಿ ಬಳಸಿಕೊಳ್ಳಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ. ಎಎಸ್‌ಐ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಹೇಳಿದೆ.

“ಯಾರೋ ಬಂದು ಕ್ಷುಲ್ಲಕ ಅರ್ಜಿ ಸಲ್ಲಿಸಿ, ಕಟ್ಟಡದ ಕೆಳಗೆ ಸ್ಮಾರಕ ಇದೆ ಎಂದು ಹೇಳಿದರೆ ನೀವು ಎಎಸ್‌ಐ ಸಮೀಕ್ಷೆಗೆ ಆದೇಶ ಮಾಡುವಿರಾ” ಎಂದು ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು ಮುಸ್ಲಿಮ್‌ ಪಕ್ಷಕಾರರ ಪರವಾಗಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, “ನಿಮಗೆ ಕ್ಷುಲ್ಲಕವಾಗಿರುವುದು ಮತ್ತೊಂದು ಬದಿಯಲ್ಲಿರುವವರಿಗೆ ನಂಬಿಕೆಯಾಗಿರುತ್ತದೆ” ಎಂದು ಸಿಜೆಐ ಚಂದ್ರಚೂಡ್‌ ಹೇಳಿದರು.

Kannada Bar & Bench
kannada.barandbench.com