ಕೋವಿಡ್ ಲಾಕ್‌ಡೌನ್ ಪರಿಣಾಮ ಮುಚ್ಚಲಾಗಿದ್ದ ದೇಶದ 14 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು ಈ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ.
ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ನ್ಯಾಯಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಬಯಸಿದೆ. ಜೊತೆಗೆ ದೇಶದ ಸಾಲಿಸಿಟರ್ ಜನರಲ್ ಅವರಿಗೂ ನೋಟಿಸ್ ನೀಡಲಾಗಿದೆ.
ಅರ್ಜಿಯ ಪ್ರತಿಪಾದನೆ ಏನು?
ಅಂಗನವಾಡಿಗಳನ್ನು ಪುನರಾರಂಭಿಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ನಿಬಂಧನೆಗಳಿಗೆ ಅನುಗುಣವಾಗಿ ಸೇವೆಗಳನ್ನು ಆರಂಭಿಸಬೇಕು.
ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಬಿಸಿಯೂಟ, ಮನೆಗೊಯ್ಯುವ ಪಡಿತರ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.
ದಶಕಗಳಿಂದ ನಡೆಯುತ್ತಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಅಂಗನವಾಡಿ ಕೇಂದ್ರಗಳು ಮುಚ್ಚಿದಾಗಿನಿಂದ, ಕೋವಿಡ್ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಪರಿಣಾಮ ದೇಶದ ಹಲವು ದುರ್ಬಲ ವರ್ಗಗಳು ಅಪೌಷ್ಠಿಕತೆಯಿಂದ ಬಳಲುವಂತಾಗಿದೆ.
ನ್ಯಾಯಾಲಯ ಮತ್ತೆ ಮತ್ತೆ ಆದೇಶ, ನಿರ್ದೇಶನಗಳನ್ನು ನೀಡಿದ ಹೊರತಾಗಿಯೂ ಐಸಿಡಿಎಸ್ ಗೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಕಠೋರ ಪರಿಸ್ಥಿತಿ ಇದೆ.
ಅಂಗನವಾಡಿ ಕೇಂದ್ರಗಳನ್ನು ಮುಚ್ಚಿರುವುದರಿಂದ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ನವಜಾತ ಶಿಶುಗಳು ಹಾಗೂ ದುರ್ಬಲ ವರ್ಗದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಇದೆ.
ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವಂತೆ ಮಾರ್ಚಿಯಲ್ಲಿ ನೀಡಲಾದ ನಿರ್ದೇಶನದ ಹೊರತಾಗಿಯೂ ವಸ್ತುಸ್ಥಿತಿ ಬೇರೆಯೇ ಇದೆ. ಹಠಾತ್ ಲಾಕ್‌ಡೌನ್, ಕೋವಿಡ್ ಪ್ರೇರಿತ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಸಹಾಯಕ ವರ್ಗಗಳು ತೀವ್ರ ಸಂಕಷ್ಟದಲ್ಲಿವೆ.
ಪೌಷ್ಠಿಕಾಂಶ ಒದಗಿಸುವಲ್ಲಿ ಉಂಟಾಗಿರುವ ಅಂತರವನ್ನು ಗಮನಿಸಿದರೆ ಈಗಿನ ಸೋಂಕು ವಿಶ್ವ ಸಂಸ್ಥೆಯ ಆಹಾರ ಕಾರ್ಯಕ್ರಮ ಬಣ್ಣಿಸಿರುವಂತೆ "ಹಸಿವಿನ ಸಾಂಕ್ರಾಮಿಕ"ಕ್ಕೂ ಕಾರಣವಾಗಬಹುದು.
ತೀವ್ರ ಅಪೌಷ್ಟಿಕತೆ, ಕುಪೋಷಣೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ತಾಯಂದಿರಿಗೆ ಕೋವಿಡ್ 19 ಸಂಬಂಧಿ ಸುರಕ್ಷತೆಗಳೊಂದಿಗೆ ಅಗತ್ಯ ಆಹಾರ ಮತ್ತು ಪಡಿತರ ಒದಗಿಸುವುದು ಈ ಸಮಯದಲ್ಲಿ ಕಡ್ಡಾಯವಾಗಿದೆ.
ವಕೀಲೆ ದೀಪಿಕಾ ಜಗತ್ರಾಂ ಸಹಾನಿ ಅವರು ಸಾರ್ವಜನಿಕ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೇಸ್ ವಾದ ಮಂಡಿಸಿದರು.