ಕೇರಳ ಸ್ಟೋರಿ ಸಿನಿಮಾ ವಿರುದ್ಧ ಸುಪ್ರೀಂ ಬಳಿಕ ಇದೀಗ ಕೇರಳ ಹೈಕೋರ್ಟ್‌ಗೆ ಅರ್ಜಿ: ಸಿನಿಮಾಗೆ ಅನಗತ್ಯ ಪ್ರಚಾರ ಎಂದ ಪೀಠ

ಆದರೂ ವಕೀಲ ಅನೂಪ್ ವಿ ಆರ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಪೀಠ, ಚಿತ್ರದ ನಿರ್ಮಾಪಕರು ಹಾಗೂ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
Kerala High Court and The Kerala Story
Kerala High Court and The Kerala Story

ಕೇರಳ ಸ್ಟೋರಿಯಂತಹ ಸಿನಿಮಾಗಳ ವಿರುದ್ಧದ ಅರ್ಜಿಗಳು ಅಂತಹ ಸಿನಿಮಾಗಳಿಗೆ ಅನಗತ್ಯ ಪ್ರಚಾರ ನೀಡುತ್ತವೆ ಎಂದು ಕೇರಳ ಹೈಕೋರ್ಟ್ ಮಂಗಳವಾರ ಹೇಳಿದೆ.

ಆದರೂ ನ್ಯಾಯಮೂರ್ತಿಗಳಾದ ಎನ್ ನಗರೇಶ್ ಮತ್ತು ಮೊಹಮ್ಮದ್ ನಿಯಾಸ್ ಸಿ ಪಿ ಅವರಿದ್ದ ಪೀಠ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ವಕೀಲ ಅನೂಪ್ ವಿ ಆರ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಚಿತ್ರ ನಿರ್ಮಾಪಕರ ಪ್ರತಿಕ್ರಿಯೆ ಕೇಳಿದೆ.

ಈ ರೀತಿಯ ಅರ್ಜಿಯು ಈ ಸಿನಿಮಾಗಳಿಗೆ ಅನಗತ್ಯ ಪ್ರಚಾರ ನೀಡುವುದಿಲ್ಲವೇ? ಕಲೆಯ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ನಿಷೇಧ ಹೇರುವುದಾದರೂ ಹೇಗೆʼ ಎಂದು ನ್ಯಾಯಮೂರ್ತಿ ನಗರೇಶ್ ಪ್ರಶ್ನಿಸಿದರು.

ಸಿನಿಮಾದ ಟೀಸರ್‌ನಲ್ಲಿ ದ್ವೇಷಪೂರಿತ ಮಾತುಗಳಿದ್ದು, ಕೇರಳ ರಾಜ್ಯಕ್ಕೆ ಮಾಡಿದ ಅವಮಾನ ಎಂದು ಅರ್ಜಿದಾರರ ಪರ ವಕೀಲ ಕಾಳೀಶ್ವರಂ ರಾಜ್ ವಾದ ಮಂಡಿಸಿದರು. “ಇದು ಕೇವಲ ಕಲೆ ಅಲ್ಲವೇ? ಇದಕ್ಕೂ ದ್ವೇಷಭಾಷಣಕ್ಕೂ ಹೇಗೆ ನಂಟು ಕಲ್ಪಿಸಲು ಸಾಧ್ಯ?” ಎಂದು ನ್ಯಾಯಾಲಯ ಪ್ರಶ್ನಿಸಿತು.

“ಈಗ ಟ್ರೇಲರ್ ಮಾತ್ರ ಸಾರ್ವಜನಿಕರಿಗೆ ಲಭ್ಯವಿದ್ದು ಸತ್ಯಕಥೆಗಳನ್ನು ಚಿತ್ರ ಆಧರಿಸಿದೆ ಎಂದು ಚಿತ್ರ ತಯಾರಕರು ಹೇಳುತ್ತಿದ್ದಾರೆ. ಇದು ನಾಡು ಹಾಗೂ ಅದರ ಜನರಿಗೆ ಮಾಡಿದ ಅಪಮಾನ. ಇದು ದ್ವೇಷ ಭಾಷಣವಲ್ಲ ಎಂದು ನ್ಯಾಯಾಲಯ ಪರಿಗಣಿಸುವುದಾದರೆ ಉಳಿದದ್ದನ್ನೂ ದ್ವೇಷ ಭಾಷಣ ಎಂದು ಕರೆಯಲಾಗದು” ಎಂದು ಅವರು ವಾದಿಸಿದರು.

ಚಿತ್ರದ ನಿರ್ಮಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಶ್ರೀಕುಮಾರ್ ಟೀಸರ್‌ಗೆ ಸೆನ್ಸಾರ್‌ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಿತ್ರ ಬಿಡುಗಡೆಯ ಮುನ್ನಾದಿನ ಅರ್ಜಿದಾರರು ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪದ್ಮಾವತ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅವರು ಉಲ್ಲೇಖಿಸಿದರಾದರೂ ಅರ್ಜಿದಾರರ ಪರ ವಾದ ಮಂಡಿಸಿದ ರಾಜ್‌ ಅವರು ಆ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದರು.

ಚಿತ್ರದ ಭಾಗಶಃ ಅವಲೋಕನ ಮಾಡಿದ ಮಂಡಳಿ ಪ್ರಮಾಣಪತ್ರ ನೀಡಿದೆ ಎಂಬುದು ನನ್ನ ವಾದ. ಟ್ರೇಲರ್‌ ಮತ್ತು ಚಿತ್ರದ ವಸ್ತುವಿಷಯಗಳು ಸಂಪೂರ್ಣ ನಂಜುಕಾರುವಂತಿವೆ. ಟೀಸರ್‌, ಟ್ರೇಲರ್‌ಗೆ ಸೆನ್ಸಾರ್‌ ಮಂಡಳಿ ಪ್ರಮಾಣಪತ್ರ ನೀಡಿದೆಯೇ ಎಂದು ಅವರು ಪ್ರಶ್ನಿಸಿದರು.

ಅಲ್ಲದೆ ತಮ್ಮ ಈಗಿನ ಆಕ್ಷೇಪ ಇರುವುದು ಚಿತ್ರಕ್ಕಿಂತಲೂ ಹೆಚ್ಚಾಗಿ ಟೀಸರ್‌ ಬಗ್ಗೆಯೇ. ಟೀಸರ್‌ಗೆ ಅನುಮತಿ ಪಡೆಯಲಾಗಿದೆಯೇ ಎಂದು ಅವರು ಮತ್ತೆ ಪ್ರಶ್ನಿಸಿದರು.

"ಇದೇ ಸಿನಿಮಾಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದಾಗಿ ಉಪ ಸಾಲಿಸಿಟರ್‌ ಜನರಲ್‌ ಎಸ್‌ ಮನು ತಿಳಿಸಿದರು. ಟೀಸರ್‌ ಅನ್ನು ಆಂಶಿಕವಾಗಿ ಮೌಲ್ಯಮಾಪನ ಮಾಡಿ ಪ್ರಮಾಣಪತ್ರ ಮಾಡಲಾಗಿದೆ ಎಂಬ ಅರ್ಜಿದಾರರ ಆರೋಪದಲ್ಲಿ ಹುರುಳಿಲ್ಲ. ಇದು ಕೆಲ ಜನರ ಅಭಿಪ್ರಾಯ ಅಷ್ಟೇ ಎಂದು ಅವರು ಹೇಳಿದರು.

ಆಗ ಮತ್ತೆ ಪಟ್ಟು ಹಿಡಿದ ರಾಜ್‌ ಅವರು “ಚಲನಚಿತ್ರ ನಿಷೇಧಿಸಲು ನಾನು ಬಯಸುತ್ತಿಲ್ಲ. ಕಾನೂನಾತ್ಮಕ ಆಡಳಿತವನ್ನು ಪಾಲಿಸಬೇಕಾಗುತ್ತದೆ. ಟೀಸರ್‌ಗೆ ಪ್ರಮಾಣಪತ್ರ ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ನನಗೆ ದೃಢೀಕರಣ ಬೇಕು. ಈ ನ್ಯಾಯಾಲಯ ಇದನ್ನು ಪ್ರಶ್ನಿಸದಿದ್ದರೆ ಇನ್ನಾರೂ ಹಾಗೆ ಮಾಡಲು ಸಾಧ್ಯವಾಗದು” ಎಂದರು.

ಅಂತಿಮವಾಗಿ ನ್ಯಾಯಾಲಯ ಸೆನ್ಸಾರ್‌ ಮಂಡಳಿ ಟೀಸರ್‌ಗೆ ಹಸಿರು ನಿಶಾನೆ ತೋರಿತ್ತೆ ಎಂಬ ಬಗ್ಗೆ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿತು. ಪ್ರಕರಣದ ಮುಂದಿನ ವಿಚಾರಣೆ ಮೇ 5 ರಂದು ನಡೆಯಲಿದೆ.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಇದೇ ಬಗೆಯ ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಇಂದು ನಿರಾಕರಿಸಿತ್ತು. ಅರ್ಜಿದಾರರು ಹೈಕೋರ್ಟ್‌ಗೆ ತೆರಳಬಹುದು ಇಲ್ಲವೇ ಪ್ರಕರಣವನನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಎದುರು ಪ್ರಸ್ತಾಪಿಸಬಹುದು ಎಂದು ತಿಳಿಸಿತ್ತು.

ಈ ನಡುವೆ ಜಾಮಿಯತ್‌ ಉಲಾಮಾ-ಇ-ಹಿಂದ್‌ ಸಂಘಟನೆಯು ಚಿತ್ರಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ಮಂದಿರಗಳಲ್ಲಿಯಾಗಲಿ ಅಥವಾ ಒಟಿಟಿ ವೇದಿಕೆಗಳಲ್ಲಾಗಲಿ, ಮತ್ತಿನ್ನಾವುದೇ ಮಾಧ್ಯಮದ ಮೂಲಕವಾಗಲಿ ಚಿತ್ರದ ಬಿಡುಗಡೆಗೆ ಅನುಮತಿಸಬಾರದು ಎಂದು ಮನವಿ ಮಾಡಿದೆ. ಚಿತ್ರದ ಬಿಡುಗಡೆಗೆ ಅನುಮತಿಸಿದರೆ ಅದು ಸಮಾಜದ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ಶತೃತ್ವಕ್ಕೆ ಕಾರಣವಾಗಲಿದೆ ಎಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com