ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿ

ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಮೊದಲೇ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ಚುನಾವಣೆ ಹೊಸ್ತಿಲಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಹೇಳಿತ್ತು.
Supreme Court, Jammu and Kashmir
Supreme Court, Jammu and Kashmir
Published on

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ನೀಡಲು ಕೋರಿದ್ದ ಅರ್ಜಿಯನ್ನು ಆಲಿಸಲು ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್‌  ಗುರುವಾರ ತಿಳಿಸಿದೆ.

ರಾಜ್ಯದ ಸ್ಥಾನಮಾನ  ಮರುಸ್ಥಾಪಿಸದೇ ಇರುವುದರಿಂದ ಕಾಶ್ಮೀರದ ಜನರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಕಾಲೇಜು ಅಧ್ಯಾಪಕ ಜಹೂರ್ ಅಹ್ಮದ್ ಭಟ್ ಮತ್ತು ಸಾಮಾಜಿಕ ಕಾರ್ಯಕರ್ತ ಖುರ್ಷಾಯಿದ್ ಅಹ್ಮದ್ ಮಲಿಕ್ ಅವರು ಸಲ್ಲಿಸಿರುವ ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿತ್ತು.

 ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಇಂದು ಸಿಜೆಐ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.

Also Read
ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಅರ್ಜಿಗಳಲ್ಲಿ ರಾಜ್ಯದ ಸ್ಥಾನಮಾನ ಮರಳಿಸಲು ಕೋರಿರುವ ಅರ್ಜಿಯೊಂದು ಇದೆ. ಅದನ್ನು ಕಾಲಮಿತಿಯೊಳಗೆ ವಿಚಾರಣೆ ನಡೆಸಬೇಕು ಎಂದು ಶಂಕರನಾರಾಯಣನ್‌ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ 'ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು' ಎಂದು ತಿಳಿಸಿದರು.

ಚುನಾವಣೆ ಹೊಸ್ತಿಲಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಮೊದಲೇ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದಿತ್ತು.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿರುವುದರಿಂದ, ಕಾಲಮಿತಿಯೊಳಗೆ ರಾಜ್ಯದ ಸ್ಥಾನಮಾನ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೆ ಭದ್ರತಾ ಆತಂಕ ಇರದು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆಯಲಾಗಿತ್ತು. ಬಳಿಕ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಆ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ನಿನ್ನೆ (ಬುಧವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಮತ್ತು ವಿಧಾನಸಭೆಯ ಕೆಲವು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ಅವರ ಸರ್ಕಾರ ರೂಪುಗೊಂಡಿದೆ.

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಲಾಗಿತ್ತು. ಅದೇ ರಾಜ್ಯದಿಂದ ಲಡಾಖ್‌ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಲಾಗಿತ್ತು.

ಸಂವಿಧಾನದ  370ನೇ ರದ್ದತಿ ಎತ್ತಿಹಿಡಿದು ಡಿಸೆಂಬರ್ 2023ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಕಳೆದ ಮೇನಲ್ಲಿ ವಜಾಗೊಳಿಸಿತ್ತು.

Also Read
ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು ಮತ್ತು ಕಾಶ್ಮೀರ: ಕಾಯಿದೆಯ ಸಿಂಧುತ್ವ ನಿರ್ಧರಿಸಲು ಸುಪ್ರೀಂ ನಕಾರ

ಸಂವಿಧಾನದ 370 ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವ ಕುರಿತು ನಿರ್ಧರಿಸಲು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಕಳೆದ ವರ್ಷ ನಿರಾಕರಿಸಿತ್ತು.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕವಾದುದಾಗಿತ್ತು. ಈ ಪ್ರದೇಶಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದಿದ್ದ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ)  ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ನ್ಯಾಯಾಲಯ ಆಗ ದಾಖಲಿಸಿಕೊಂಡಿತ್ತು.

Kannada Bar & Bench
kannada.barandbench.com